HomeBreaking NewsLatest NewsPoliticsSportsCrimeCinema

ʼಹುಲಿ ಸಂರಕ್ಷಣೆ ʼ ಅನುದಾನ ಬಹುತೇಕ ಕಡಿತ, ಆರ್ಥಿಕ ಹೊಂದಾಣಿಕೆ ಅನಿವಾರ್ಯ ; ಡಾ.ರಮೇಶ್‌ ಕುಮಾರ್‌

01:48 PM Jul 30, 2024 IST | mahesh

 

'Tiger conservation' funding almost cut, financial adjustment inevitable, Dr. Ramesh Kumar

ಮೈಸೂರು, ಜು,30,2024: (www.justkannada.in news)  ಹುಲಿ ಸಂರಕ್ಷಣಾ ಪ್ರಾಧಿಕಾರವೂ ಹುಲಿ ಯೋಜನೆ ಪ್ರದೇಶಗಳಿಗೆ ನೀಡುತ್ತಿದ್ದ ಅನುದಾನವನ್ನು ಬಹುತೇಕ ಕಡಿತ ಮಾಡಿವೆ. ಶೇ.25 ರಷ್ಟು ಅನುದಾನ ಬರುತ್ತಿರುವುದರಿಂದ ನಾವೇ ಆರ್ಥಿಕ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಹುಲಿ ಯೋಜನೆ ನಿರ್ದೇಶಕ  ಡಾ.ಪಿ. ರಮೇಶ್‌ ಕುಮಾರ್‌ ಅಭಿಪ್ರಾಯಪಟ್ಟರು.

ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದ ವಿಶ್ವ ಹುಲಿ ದಿನಾಚರಣೆಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಇದಕ್ಕಾಗಿ ಈಗಾಗಲೇ ಇರುವ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಇನ್ನಷ್ಟು ಸುಸ್ಥಿರ ಹಾಗೂ ಜನಸ್ನೇಹಿಯಾಗಿ ರೂಪಿಸಲೇಬೇಕು. ನಮ್ಮದೇ ಆದಾಯ ಇದ್ದಾಗ ಅವಲಂಬಿತವಾಗುವುದು ತಪ್ಪಲಿದೆ. ಇದಕ್ಕೂ ಹುಲಿ ಯೋಜನೆ ಪ್ರದೇಶಗಳಲ್ಲಿ ಅವಕಾಶವಿದೆ.

ಹುಲಿ ಸಂರಕ್ಷಣೆಯಲ್ಲಿ ನಾವು ಮಾನವ ಸಂಪನ್ಮೂಲದ ಜತೆಗೆ ತಂತ್ರಜ್ಞಾನವನ್ನೂ ಒಂದೂವರೆ ದಶಕದಲ್ಲಿ ಯಥೇಚ್ಛವಾಗಿ ಬಳಕೆ ಮಾಡಿಕೊಂಡು ಹುಲಿಗಳನ್ನು ಉಳಿಸಿಕೊಂಡಿದ್ದೇವೆ. ತಂತ್ರಜ್ಞಾನದ ಬಳಕೆ ನಮ್ಮ ಹಲವಾರು ಸಂರಕ್ಷಣಾ ಚಟುವಟಿಕೆಗಳನ್ನು ಸರಳೀಕರಿಸಲಿದೆ. ಇದಕ್ಕಾಗಿ ಕರ್ನಾಟಕದಲ್ಲಿ ಹುಲಿ ಯೋಜಿತ  ಇನ್ನಷ್ಟು ತಂತ್ರಜ್ಞಾನ ಆಧರಿತ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಅದನ್ನು ಕರ್ನಾಟಕದಲ್ಲಿ ಮಾಡಲಾಗುತ್ತದೆ ಎಂದು ರಮೇಶ್‌ ಕುಮಾರ್‌ ವಿವರಿಸಿದರು.

ಹುಲಿ ಸಂತತಿ ಹೆಚ್ಚಿಸಲು ಸಾಧ್ಯ:

ಕರ್ನಾಟಕದಲ್ಲಿ ಇರುವ ಈಗಿನ ಘೋಷಿತ ಹುಲಿ ಪ್ರದೇಶಗಳು ಹಾಗೂ ಲಭ್ಯ ಇರುವ ಅರಣ್ಯ ಪ್ರದೇಶಗಳನ್ನೇ ಬಳಕೆ ಮಾಡಿಕೊಂಡರೆ ಹುಲಿಗಳ ಸಂಖ್ಯೆಯನ್ನು 1300 ಕ್ಕೆ ಹೆಚ್ಚಿಸಲು ಅವಕಾಶವಿದೆ. ಇದಕ್ಕಾಗಿ ನಾಲ್ಕು ಘಟಕಗಳನ್ನು ರಾಜ್ಯದಲ್ಲಿ ರೂಪಿಸಿ  ಆ ಮೂಲಕ ಕರ್ನಾಟಕದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳ ಅರಣ್ಯದಲ್ಲಿ ಹುಲಿ ಸಂರಕ್ಷಣೆ ಮಾಡಿ ಅರಣ್ಯವನ್ನು ಇನ್ನಷ್ಟು ಸುಸ್ಥಿರಗೊಳಿಸಲು ಅವಕಾಶವಿದೆ ಎಂದು ಕರ್ನಾಟಕ ಹುಲಿ ಯೋಜನೆ ನಿರ್ದೇಶಕರಾಗಿರುವ ಡಾ.ಪಿ. ರಮೇಶ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಸದ್ಯ  ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ, ಅಣಶಿ-ದಾಂಡೇಲಿ ಸೇರಿ ಐದು ಹುಲಿಧಾಮಗಳಿವೆ. ಕುದುರೆಮುಖ ಹಾಗೂ ಮಲೈಮಹಾದೇಶ್ವರ ಬೆಟ್ಟ ಹುಲಿ ಯೋಜನೆಗಳು ಪ್ರಸ್ತಾವನೆಯಲ್ಲಿವೆ. ಎರಡು ವರ್ಷದ ಹಿಂದೆ ನಡೆದಿದ್ದ ಹುಲಿ ಗಣತಿ ಪ್ರಕಾರ ಕರ್ನಾಟಕದಲ್ಲಿ ಸದ್ಯ 563 ಹುಲಿಗಳಿವೆ. ನಾಲ್ಕು ವರ್ಷದ ಅಂತರದಲ್ಲಿ 39 ಹುಲಿಗಳು ಮಾತ್ರ ಹೆಚ್ಚಾಗಿವೆ.  ಭಾರತದ ಒಟ್ಟು ಹುಲಿಗಳ ಸಂಖ್ಯೆ  3682 ರಲ್ಲಿ ಕರ್ನಾಟಕದ ಕೊಡುಗೆ ಶೇ.15 ರಷ್ಟಿದೆ.  ಅರಣ್ಯ ಇಲಾಖೆ ಸಹಯೋಗ, ಜನರ ಸಹಭಾಗಿತ್ವದಲ್ಲಿಯೇ ಇದು ಸಾಧ್ಯವಾಗಿದೆ. ಆದರೆ ಇದನ್ನು ಇನ್ನಷ್ಟು ವಿಸ್ತರಿಸಲು ವಿಪುಲ ಅವಕಾಶಗಳು ನಮ್ಮಲ್ಲಿವೆ. ಅಂದರೆ ನಾಲ್ಕು ಯೂನಿಟ್‌ಗಳಾಗಿ ಇದನ್ನು ವಿಂಗಡಿಸಬಹುದು. ಈಗಿರುವ ಬಂಡೀಪುರ ಹಾಗೂ ನಾಗರಹೊಳೆ ಜತೆಗೆ ಮಡಿಕೇರಿ ವನ್ಯಜೀವಿ ವಲಯ ವಿಸ್ತರಣೆ, ಬಿಳಿಗಿರಿರಂಗನಬೆಟ್ಟ,ಮಲೈಮಹಾದೇಶ್ವರ, ಕಾವೇರಿ, ಬನ್ನೇರಘಟ್ಟ ವನ್ಯಧಾಮಗಳ ಯೂನಿಟ್‌, ಭದ್ರಾ, ಕುದುರೆಮುಖ, ಶಿವಮೊಗ್ಗ, ಕಾರವಾರ, ಅಣಶಿ-ದಾಂಡೇಲಿ, ಬೆಳಗಾವಿ ಸೇರಿ ಒಂದು ಯೂನಿಟ್‌ ರೂಪಿಸಿ ಇಲ್ಲಿ ಹುಲಿ ಸಂಖ್ಯೆ ವೃದ್ದಿಸುವ ಚಟುವಟಿಕೆ ರೂಪಿಸಬಹುದು.

ಮೊದಲು ಹುಲಿ ಆಹಾರ ಸರಪಳಿ ಸಸ್ಯಹಾರಿ ಪ್ರಾಣಿಗಳ ವೃದ್ದಿಯಾದರೆ ಸಹಜವಾಗಿಯೇ ಹುಲಿ, ಚಿರತೆಗಳ ಪ್ರಮಾಣದಲ್ಲೂ ಏರಿಕೆಯಾಗಲಿದೆ. ಇದರಿಂದ 1300  ಹುಲಿಗಳನ್ನಾದರೂ ನಾವು ಕರ್ನಾಟಕದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಇನ್ನು ಹಲವಾರು ಕಡೆ ಹುಲಿ ಕಾರಿಡಾರ್‌ಗಳು ಬೇಕು. ಕರ್ನಾಟಕದಲ್ಲಿಯೇ ಬಂಡೀಪುರದ ಹುಲಿ ಕಾವೇರಿ ವನ್ಯಧಾಮಕ್ಕೆ, ನಾಗರಹೊಳೆ ಹುಲಿ ಭದ್ರಾಗೆ ಹೋದ ಉದಾಹರಣೆಯಿದೆ. ಇದೇ ರೀತಿ ಭದ್ರಾದಿಂದ ಕಾರವಾರ, ಭದ್ರಾದಿಂದ ಕಾಳಿ ಭಾಗಕ್ಕೂ ಹುಲಿಗಳು ಸಂಚರಿಸುವ ಕಾರಿಡಾರ್‌ ಸರಿಯಾಗಬೇಕು. ಇದು ಕೂಡ ಹುಲಿ ಯೋಜನೆಗಳ ವಿಸ್ತರಣೆಗೆ ತನ್ನದೇ ಕೊಡುಗೆ ನೀಡಲಿದೆ ಎಂದು ರಮೇಶ್‌ ಕುಮಾರ್‌ ಹೇಳಿದರು.

ಕರ್ನಾಟಕ, ಕೇರಳ, ತಮಿಳುನಾಡಿನ ಐದು ಹುಲಿಧಾಮಗಳು ಒತ್ತಟ್ಟಿಗೆ ಇರುವ ಪಶ್ಚಿಮ ಘಟ್ಟಗಳ ನೀಲಗಿರಿ ಜೀವವೈವಿಧ್ಯ ತಾಣದಲ್ಲಿಯೇ ಅಂದಾಜು 800 ಹುಲಿಗಳಿವೆ. ಇದರಲ್ಲಿ ಕರ್ನಾಟಕದ ಪಾಲು  334, ತಮಿಳುನಾಡು ಪಾಲು 119 ಹಾಗೂ ಕೇರಳದ ಹುಲಿಗಳ ಸಂಖ್ಯೆ 80. ಈ ರೀತಿಯಲ್ಲೇ ನಮ್ಮ ರಾಜ್ಯದಲ್ಲೂ ಯೂನಿಟ್‌ಗಳ ರಚನೆ ಮೂಲಕ ಹುಲಿ ಯೋಜನೆಗಳ ವಿಸ್ತರಣೆ ರೂಪಿಸಬಹುದು. ದೇಶದಲ್ಲಿ ಶತಮಾನದ ಹಿಂದೆ ಇದ್ದ ಹುಲಿಗಳ ಸಂಖ್ಯೆ ಒಂದು ಲಕ್ಷ. ಸ್ವಾತಂತ್ರ್ಯ ಬರುವ ಹೊತ್ತಿಗೆ ಇದು 40 ಸಾವಿರಕ್ಕೆ ಕುಸಿದಿತ್ತು. ಮುಂದೆ ಮೂರು ದಶಕದಲ್ಲಿ 1872ಕ್ಕೆ ಕುಸಿಯಿತು. ಆಗಲೇ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರಲ್ಲಿ ಬಂತು. ಇದಾದ ಮರು ವರ್ಷದೇ ಹುಲಿ ಯೋಜನೆಗಳ ಘೋಷಣೆಯಾದವು. ಐದು ದಶಕದಲ್ಲಿ ಹುಲಿಗಳ ಸಂಖ್ಯೆ ಅಂದಾಜು 3682ಕ್ಕೆ ಬಂದಿದೆ. ಎರಡು ದಶಕದಲ್ಲಿ ಕ್ಯಾಮರಾ ಟ್ರಾಪ್‌ ಸಹಿತ ಹಲವಾರು ತಂತ್ರಜ್ಞಾನ, ಸಂರಕ್ಷಣಾ ನೀತಿ ಜಾರಿ, ಅನುಷ್ಠಾನದಿಂದ ಈಗ ಹುಲಿ ಸಂಖ್ಯೆ ಸುಧಾರಿಸಿದೆ. ಇನ್ನಷ್ಟು ಚಟುವಟಿಕೆಗೆ ಈಗಿನಿಂದಲೇ ಕರ್ನಾಟಕದಲ್ಲಿ ಯೋಜನೆ ಬೇಕೇ ಬೇಕು.

ಹುಲಿ ಯೋಜನೆಗಳನ್ನು ಉನ್ನತೀಕರಣಗೊಳಿಸುವಾಗ ಹಲವಾರು ತೊಡಕುಗಳು ಬಂದೇ ಬರುತ್ತವೆ. ಇದಕ್ಕಾಗಿ ಸಮುದಾಯದ ಸಹಭಾಗಿತ್ವವಿಲ್ಲದೇ ಯಾವುದೇ ಯೋಜನೆ. ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ. ಇದಕ್ಕಾಗಿ ಸಮುದಾಯದ, ಸ್ಥಳೀಯರ ಸಹಯೋಗದೊಂದಿಗೆ ಯೋಜನೆಗಳನ್ನು ರೂಪಿಸಬೇಕು. ವಿಶೇಷವಾಗಿ ಗಿರಿಜನರ ಸಮ್ಮಿಳಿತ ಯೋಜನೆಗಳು ದೀರ್ಘಕಾಲೀನ ಯಶಸ್ಸು ನೀಡುತ್ತವೆ ಎಂದು ಸಲಹೆ ನೀಡಿದರು.

ಬಹಳಷ್ಟು ಜನ ಅರಣ್ಯದ ಸಮೀಪದಲ್ಲೇ ಇದ್ದರೂ ಅಲ್ಲಿನ ವಿಶೇಷತೆಗಳು ತಿಳಿದುಕೊಂಡಿರುವುದಿಲ್ಲ. ನಮ್ಮೂರಿನ ಅರಣ್ಯ ಪ್ರದೇಶ ಜಾಗತಿಕ ಮಟ್ಟದಲ್ಲಿ ಎಷ್ಟು ಪ್ರಮುಖ ಎನ್ನುವುದೇ ಗೊತ್ತಿರುವುದಿಲ್ಲ. ಈ ಕಾರಣದಿಂದ ಔಟ್‌ ರೀಚ್‌ ಕಾರ್ಯಕ್ರಮಗಳನ್ನು ಆಯಾ ಹುಲಿ ಯೋಜನೆ ಪ್ರದೇಶಗಳಲ್ಲಿ ರೂಪಿಸಲೇಬೇಕು. ಬಂಡೀಪುರದಲ್ಲಿ ಆರಂಭಿಸಿ ಯಶಸ್ವಿಯೂ ಆಗಿರುವ ಯುವ ಮಿತ್ರ ಮಾದರಿಯ ಕಾರ್ಯಕ್ರಮ ಆಯಾ ಭಾಗದಲ್ಲಿ ಆದರೆ ಸ್ಥಳೀಯರು ತಮ್ಮೂರಿನ ಅರಣ್ಯದ ಕುರಿತು ತಿಳಿದುಕೊಂಡು ಅರಣ್ಯ ಇಲಾಖೆಗೆ ಸಹಕಾರ ನೀಡಲು ಉಪಯೋಗವೂ ಆಗಲಿದೆ ಎಂದು ತಿಳಿಸಿದರು.

ಕರ್ನಾಟಕ ಹುಲಿ ಯೋಜನೆಯ ವಿಷನ್‌ ಡಾಕುಮೆಂಟ್‌ ತರುವ ಯೋಜನೆಯಿದೆ. ಇದರಿಂದ ಮುಂದಿನ ಮೂರ್ನಾಲ್ಕು ದಶಕ ಕಾಲ ಹುಲಿ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರಲು ಹಾಗೂ ಹುಲಿ ಯೋಜನೆಗಳು ಸುಸ್ಥಿರವಾಗಿ ಕೆಲಸ ಮಾಡಲು ಸಹಕಾರಿಯಾಗಲಿದೆ. ಹುಲಿ ಸಂರಕ್ಷಣೆ ಎಂದರೆ ಹುಲಿ ಅಳಿವು ಉಳಿವಿನ ಪ್ರಶ್ನೆಯಲ್ಲ. ಹುಲಿ ಸಂರಕ್ಷಣೆ ಯೋಜನೆಯಿಂದ ಕಾಡಿನ ಅಳಿವು ಉಳಿವು ಕೂಡ ಇದೆ. ಅಲ್ಲದೇ ಆನೆ, ಚಿರತೆ, ಕಾಡೆಮ್ಮೆ, ಕಡವೆ ಸಹಿತ ಹಲವು ಪ್ರಾಣಿಗಳ ಉಳಿವೂ ಇದೆ. ಅದೊಂದು ರೀತಿ ಜೀವವೈವಿಧ್ಯತೆಯ ರಕ್ಷಣೆ ಎಂದೇ ವ್ಯಾಖ್ಯಾನಿಸಬಹುದು. ಇದರಿಂದಲೇ ಹುಲಿಯನ್ನು ಅರಣ್ಯ ರಕ್ಷಣೆಯ ರಾಯಭಾರಿ ಎಂದೂ ಕರೆಯಬಹುದು ಎಂದು ಹೇಳಿದರು.

key words: 'Tiger conservation', funding almost cut, financial adjustment, inevitable, Dr. Ramesh Kumar

Tags :
'Tiger conservation'Dr. Ramesh Kumarfinancial adjustmentfunding almost cutinevitable
Next Article