For the best experience, open
https://m.justkannada.in
on your mobile browser.

ತ್ರಿವಳಿ ತಲಾಖ್ ಕ್ರಿಮಿನಲ್ ಅಪರಾಧ: ಜೈಲು ಶಿಕ್ಷೆ, ದಂಡಕ್ಕೆ ಅವಕಾಶ: ತನ್ನ ನಿಲುವು ಸಮರ್ಥಿಸಿದ ಕೇಂದ್ರ ಸರ್ಕಾರ

06:22 PM Aug 20, 2024 IST | prashanth
ತ್ರಿವಳಿ ತಲಾಖ್ ಕ್ರಿಮಿನಲ್ ಅಪರಾಧ  ಜೈಲು ಶಿಕ್ಷೆ  ದಂಡಕ್ಕೆ ಅವಕಾಶ  ತನ್ನ ನಿಲುವು ಸಮರ್ಥಿಸಿದ ಕೇಂದ್ರ ಸರ್ಕಾರ

ನವದೆಹಲಿ: 2019ರಲ್ಲಿ ಜಾರಿಗೆ ತಂದಿರುವ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಕಾಯ್ದೆಯ ಸೆಕ್ಷನ್ 4 ರಲ್ಲಿ ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗಿದೆ. ಈ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುವ ಮೂಲಕ ತ್ರಿವಳಿ ತಲಾಖ್ ಕುರಿತು ತನ್ನ ನಿರ್ಣಯವನ್ನ ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ.

ಈ ಕಾಯ್ದೆಯು ಮುಸ್ಲಿಮರ ಹಕ್ಕುಗಳಿಗೆ ಧಕ್ಕೆಯಾಗಿದ್ದು, ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಜಮೈತ್ ಉಲಾಮಾ ಐ ಹಿಂದ್ ಹಾಗೂ ಸಮಸ್ತ ಕೇರಳ ಜಮೈತುಲ್ ಉಲೇಮಾ ಸಂಘಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.

ಅರ್ಜಿದಾರರ ವಾದವಿದು..

ತ್ರಿವಳಿ ತಲಾಖ್ ನೀಡುವುದನ್ನು ಕ್ರಿಮಿನಲ್ ಅಪರಾಧ ಎಂದು ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಿದೆ. ಇದು ಸಂವಿಧಾನಬಾಹಿರ ನಡೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಮಾನ್ಯಗೊಳಿಸಿರುವುದರಿಂದ ಅದನ್ನು ಕ್ರಿಮಿನಲ್ ಅಪರಾಧವೆಂದು ಕಾನೂನು ಮಾಡುವ ಅಗತ್ಯವಿಲ್ಲ ಅಮಾನ್ಯವಾಗಿರುವ ಪದ್ಧತಿ ಅಪರಾಧವಲ್ಲ. ಹೀಗಾಗಿ, ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.
ಇನ್ನು ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಮಾಣಪತ್ರದ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. 2019ರಲ್ಲಿ ತ್ರಿವಳಿ ತಲಾಖ್ ಅಪರಾಧ ಎಂದು ಪರಿಗಣಿಸುವ ಕಾನೂನು ಜಾರಿ ಮಾಡಿದ್ದರ ಬಗ್ಗೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಮುಸ್ಲಿಂ ಮಹಿಳೆಗೆ ಆಕೆಯ ಪತಿ ಮೂರು ಬಾರಿ ತಲಾಖ್ ಎಂದು ಹೇಳು ಮೂಲಕ ನೀಡುವ ವಿಚ್ಚೇದನ ಕ್ರಮವು 'ಕ್ರಿಮಿನಲ್ ಅಪರಾಧ. ಈ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳುವ ಮೂಲಕ ತನ್ನ ನಿರ್ಣಯವನ್ನು ಸರಿಯಾದ ಕ್ರಮ ಎಂದು ಸಮರ್ಥಿಸಿಕೊಂಡಿದೆ.

ಅಫಿಡವಿಟ್ನಲ್ಲಿ ವಿವರಿಸಿದಂತೆ, 2019ರ ಕಾಯಿದೆಯು ವಿವಾಹಿತ ಮುಸ್ಲಿಂ ಮಹಿಳೆಯರ ನ್ಯಾಯ ಮತ್ತು ಲಿಂಗ ಸಮಾನತೆಯನ್ನು ತಂದ ದೊಡ್ಡ ಬೆಳವಣಿಗೆಯಾಗಿದೆ. ಈ ಮೂಲಕ ಅವರೂ ಸಾಂವಿಧಾನಿಕ ಹಕ್ಕುಗಳನ್ನು ಹೊಂದಲು ಸಹಕಾರಿಯಾಗಿದೆ. ಮೂಲಭೂತ ಹಕ್ಕುಗಳ ತಾರತಮ್ಯ ನಿಲ್ಲಿಸಿ, ಸಬಲೀಕರಣದ ಹೆಜ್ಜೆ ಇಡಲಾಗಿದೆ ಎಂದು ತಿಳಿಸಿದೆ.

2019ರ ಕಾಯ್ದೆಯು ವಿವಾಹಿತ ಮುಸ್ಲಿಂ ಮಹಿಳೆಯರ ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖವಾಗಿದೆ. ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಪಡಿಸಿದ ನಂತರವೂ ಮಹಿಳೆಯರು ತ್ರಿವಳಿ ತಲಾಖ್ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ತ್ರಿವಳಿ ತಲಾಖ್ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸುವುದು ಬಿಟ್ಟರೆ ಅವರಿಗೆ ಬೇರೆ ಹಾದಿ ಇಲ್ಲ. ಇಂತಹ ಸಂತ್ರಸ್ತ ಮಹಿಳೆಯ ಪತಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲೂ ಯಾವುದೇ ನಿಯಮಗಳಿಲ್ಲ. ಇಂತವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರೂ ಅಸಹಾಯಕರಾಗಿದ್ದರು. ವಿವಾಹಿತ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ಶೋಚನೀಯ ಸ್ಥಿತಿಯನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ನಿಲುವನ್ನುಸಮರ್ಥಿಸಿಕೊಂಡಿದೆ.

ಅಲ್ಲದೇ, ತ್ರಿವಳಿ ತಲಾಖ್ ಸಾಮಾಜಿಕವಾಗಿಯೂ ಮಾರಕ ವ್ಯವಸ್ಥೆಯಾಗಿದೆ. ಅದನ್ನು ನಿರ್ಮೂಲನೆ ಮಾಡುವುದು ಇಂದಿನ ಅಗತ್ಯ. ಜತೆಗೆ ಕಾಯ್ದೆಯು ಸಂತ್ರಸ್ತ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕುಗಳನ್ನು ನೀಡಲು ಸಹಕಾರಿಯಾಗಿದೆ. ಮೂಲಭೂತ ಹಕ್ಕುಗಳ ತಾರತಮ್ಯ ನಿಲ್ಲಿಸಿ, ಸಬಲೀಕರಣದ ಹೆಜ್ಜೆ ಇಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೃಪೆ

ಲಾ ಗೈಡ್ ಕಾನೂನು ಮಾಸ ಪತ್ರಿಕೆ

key words: Triple talaq, criminal offence,  Center govt, defends

Tags :

.