For the best experience, open
https://m.justkannada.in
on your mobile browser.

ಕೇಂದ್ರ ಬಜೆಟ್ : ಸುಮ್ಮನೆ ಅಂಗೈಯಲ್ಲಿ ಆಕಾಶ ತೋರಿಸಿದ್ದಾರಷ್ಟೆ- ಸಚಿವ  ಎಂ.ಬಿ ಪಾಟೀಲ್ ಟೀಕೆ.

01:13 PM Feb 02, 2024 IST | prashanth
ಕೇಂದ್ರ ಬಜೆಟ್   ಸುಮ್ಮನೆ ಅಂಗೈಯಲ್ಲಿ ಆಕಾಶ ತೋರಿಸಿದ್ದಾರಷ್ಟೆ  ಸಚಿವ  ಎಂ ಬಿ ಪಾಟೀಲ್ ಟೀಕೆ

ಬೆಂಗಳೂರು,ಫೆಬ್ರವರಿ,2,2024(www.justkannada.in): ಕೇಂದ್ರ ಸರಕಾರವು ಮಂಡಿಸಿರುವ ಮಧ್ಯಾಂತರ ಬಜೆಟ್ ತುಂಬಾ ನಿರಾಶಾದಾಯಕವಾಗಿದೆ. ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಮತದಾರರನ್ನು ಮರುಳು ಮಾಡುವಂತಹ ಚಮತ್ಕಾರಿಕ ಮಾತುಗಾರಿಕೆಯಷ್ಟೇ ಇದರಲ್ಲಿ ತುಂಬಿದೆ. ಸುಮ್ಮನೆ ಅಂಗೈಯಲ್ಲಿ ಆಕಾಶ ತೋರಿಸಿದ್ದಾರಷ್ಟೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಟೀಕಿಸಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಬಗ್ಗೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, `ನಿರ್ಮಲಾ ಸೀತಾರಾಮನ್ ಅವರು ಪ್ರತಿಯೊಂದರಲ್ಲೂ ದೇಶವು 2014ರಿಂದ ಈಚೆಗೆ ಮಾತ್ರ ಭಾರೀ ಸಾಧನೆ ಮಾಡಿದೆ ಎಂದು ಹೇಳುವ ಕೆಲಸವನ್ನಷ್ಟೆ ಮಾಡಿದ್ದಾರೆ. ಹಾಗಾದರೆ, 60 ವರ್ಷಗಳ ಕಾಲ ದೇಶವನ್ನಾಳಿರುವ ಕಾಂಗ್ರೆಸ್ ದೇಶವನ್ನು ಕಟ್ಟಿದ್ದಕ್ಕೆ ಬೆಲೆ ಕಟ್ಟುವುದೇ ಸಾಧ್ಯವಿಲ್ಲ’ ಎಂದರು.

ಆದಾಯ ತೆರಿಗೆಯಲ್ಲಿ ಜನರು ಹೆಚ್ಚಿನ ರಿಯಾಯಿತಿ/ವಿನಾಯಿತಿ ಬಯಸಿದ್ದರು. ಈಗ ನೋಡಿದರೆ ಮೋದಿ ಏನನ್ನೂ ಕೊಟ್ಟಿಲ್ಲ. ಸುಮ್ಮನೆ ಅಭಿವೃದ್ಧಿಯ ಮಂತ್ರ ಹೇಳುತ್ತ, ಜನರ ಭಾರವನ್ನು ಹಾಗೆಯೇ ಉಳಿಸಿದ್ದಾರೆ. ಅವರು ಸದಾ ಹೇಳುವ ಈಸ್ ಆಫ್ ಲಿವಿಂಗ್ ಪರಿಕಲ್ಪನೆಗೆ ಈಗ ಅರ್ಥವಿನ್ನೆಲ್ಲಿ ಉಳಿಯಿತು? ರೈತರು, ಮಹಿಳೆಯರು, ಯುವಜನರು ಮತ್ತು ಬಡವರನ್ನು ಬರೀ ವೋಟ್ ಬ್ಯಾಂಕ್ ಆಗಿ ನೋಡಿರುವ ಬಜೆಟ್ ಇದು ಎಂದು ಅವರು ಅಭಿಪ್ರಾಯಪಟ್ಟರು.

ಮೂಲಸೌಕರ್ಯ, ವಿದೇಶಿ ನೇರ ಬಂಡವಾಳ ಇವೆಲ್ಲ ದೇಶಕ್ಕೆ ಕಾಂಗ್ರೆಸ್ಸಿನ ಕೊಡುಗೆಗಳಾಗಿವೆ. 30 ವರ್ಷಗಳ ಹಿಂದೆ ನಮ್ಮ ಪಕ್ಷದ ಸರಕಾರವಿದ್ದಾಗ ಉದಾರೀಕರಣ ಜಾರಿಗೆ ಬಂತು. ಇವೆಲ್ಲವೂ ಅದರ ಕೊಡುಗೆಗಳು. ಹಣದುಬ್ಬರ ನಿಯಂತ್ರಣ, ಉದ್ಯೋಗ ಸೃಷ್ಟಿ ಇವುಗಳ ಬಗ್ಗೆ ಈ ಮಧ್ಯಂತರ ಬಜೆಟ್ಟಿನಲ್ಲಿ ಏನನ್ನೂ ನಿರ್ದಿಷ್ಟವಾಗಿ ಹೇಳಿಲ್ಲ. ಸುಮ್ಮನೆ ಅಂಗೈಯಲ್ಲಿ ಆಕಾಶ ತೋರಿಸಲಾಗಿದೆಯಷ್ಟೆ ಎಂದು ಪಾಟೀಲ್ ಹೇಳಿದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಒತ್ತು ಕೊಡಲಾಗಿದೆ ಎಂದು ಹೇಳಿದ್ದಾರೆ. ಇದರಲ್ಲಿ ರಾಜ್ಯ ಸರಕಾರಗಳ ಪಾತ್ರವೇ ನಿರ್ಣಾಯಕವಾಗಿರುತ್ತದೆ. ಇದರಲ್ಲಿ ಕೇಂದ್ರ ಸರಕಾರದ ಪಾತ್ರ ತುಂಬಾ ಸೀಮಿತವಾಗಿರುತ್ತದೆ. ಒಟ್ಟಿನಲ್ಲಿ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಬರೀ ಗಿಮಿಕ್ಕುಗಳನ್ನು ತೇಲಿಬಿಟ್ಟಿದ್ದಾರೆ ಎಂದು ಎಂಬಿ ಪಾಟೀಲ್ ಟೀಕಿಸಿದ್ದಾರೆ.

Key words: Union Budget- Minister- MB Patil- criticism

Tags :

.