For the best experience, open
https://m.justkannada.in
on your mobile browser.

ಉತ್ತರಕನ್ನಡ ಜಿಲ್ಲೆ ಜನ ರಾಜಕೀಯವಾಗಿ ಪ್ರಜ್ಞಾವಂತರು: ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ-ಸಿ.ಎಂ.ಸಿದ್ದರಾಮಯ್ಯ ಭರವಸೆ.

04:37 PM May 03, 2024 IST | prashanth
ಉತ್ತರಕನ್ನಡ ಜಿಲ್ಲೆ ಜನ ರಾಜಕೀಯವಾಗಿ ಪ್ರಜ್ಞಾವಂತರು  ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಸಿ ಎಂ ಸಿದ್ದರಾಮಯ್ಯ ಭರವಸೆ

ಉತ್ತರಕನ್ನಡ, ಮೇ,3 ,2024 (www.justkannada.in):  ಉತ್ತರಕನ್ನಡ ಜಿಲ್ಲೆ ಜನ ರಾಜಕೀಯವಾಗಿ ಪ್ರಜ್ಞಾವಂತರು.  ನುಡಿದಂತೆ ನಡೆಯುವವರನ್ನು ಗುರುತಿಸುವ ಪ್ರಜ್ಞಾವಂತಿಕೆ ಇವರಿಗಿದೆ.  ಈ ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಸಿ.ಎಂ.ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಉತ್ತರಕನ್ನಡ ಜಿಲ್ಲೆ ಲೋಕಸಭಾ ಕ್ಷೇತ್ರದ ಮುಂಡಗೋಡು ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಗೆಲುವಿನ ಸಂದೇಶ ನೀಡಿ ಜನಸಮಾವೇಶದಲ್ಲಿ ಮಾತನಾಡಿದರು.

ವೃತ್ತಿಯಲ್ಲಿ ವೈದ್ಯೆ ಆಗಿರುವ ಮರಾಠ ಸಮುದಾಯದ ಸಜ್ಜನ ಮತ್ತು ಜನಪರ ಕಾಳಜಿ ಇರುವ ಮಹಿಳೆ ಈ ಬಾರಿ ನಿಮ್ಮ ಪ್ರತಿನಿಧಿಯಾಗಿದ್ದಾರೆ. ಇವರಿಗೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಿ. ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಪಾರ್ಲಿಮೆಂಟಿನಲ್ಲಿ ಹೋರಾಟ ನಡೆಸಿ ನಿಮಗೆ ಸ್ಪಂದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಳ್ಳರು ಯಾರು, ಭಾರತೀಯರನ್ನು ನಂಬಿಸಿ ದ್ರೋಹ ಬಗೆದವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳುವಷ್ಟು ತಿಳಿವಳಿಕೆ ಈ ಜಿಲ್ಲೆಯ ಜನತೆಗೆ ಇದೆ. ಹೀಗಾಗಿ ಈ ಬಾರಿ ಅತ್ಯಂತ ಪ್ರಜ್ಞಾವಂತಿಕೆಯಿಂದ ಮತದಾನ ಮಾಡ್ತಾರೆ ಎಂದು ಖಚಿತವಾಗಿ ನುಡಿದರು.

ನನಗೆ ಅಧಿಕಾರ ಕೊಡಿ. 100 ದಿನದಲ್ಲಿ ವಿದೇಶದಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬ  ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದಿದ್ದ ಮೋದಿ ಹತ್ತತ್ತು ವರ್ಷ ನಿಮಗೆಲ್ಲಾ ಮೂರು ನಾಮ ಹಾಕುತ್ತಾ ತಿರುಗಿದ್ರು. ಇಂಥಾ ಸುಳ್ಳುಕೋರ ಮುಖ ನೋಡಿ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರುತ್ತದೆಯೇ ಎಂದು ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದ ಮೋದಿ , ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ಹೇಳಿದ್ದ ಮೋದಿ, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಮೋದಿ ಯಾವುದನ್ನೂ ಈಡೇರಿಸದೆ ಭಾರತೀಯರಿಗೆ ನಂಬಿಸಿ ಮತ ಪಡೆದು ಮೋಸ ಮಾಡಿದರು ಎಂದರು.

ಸಂಕಷ್ಟಕ್ಕೆ ಸ್ಪಂದಿಸಲು ಗ್ಯಾರಂಟಿ ಯೋಜನೆ

ಮೋದಿ ಸರ್ಕಾರದ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ರಾಜ್ಯದ ಜನರ ಬದುಕಿಗೆ ಸ್ಪಂದಿಸುವ ಕಾರಣದಿಂದ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆವು. ರಾಜ್ಯದ ಪ್ರತೀ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿದೆವು. ಕೇವಲ ಜನರ ಭಾವನೆಗಳನ್ನು ಕೆರಳಿಸಿ ಬದುಕಿನ ಜತೆ ಚೆಲ್ಲಾಟ ಆಡುವ ಬಿಜೆಪಿಯವರು ಜನರ ಬದುಕಿನ್ನು ಸಂಕಷ್ಟಕ್ಕೆ ದೂಡಿದರು ಎಂದು ವಿವರಿಸಿದರು.

ರಾಜ್ಯದ ಜನರಿಗೆ ಅಕ್ಕಿ ಕೊಡಿ, ಹಣ ಕೊಡ್ತೀವಿ ಎಂದು ಎಷ್ಟು ಕೇಳಿದರೂ ಮೋದಿ ಸರ್ಕಾರ ಅಕ್ಕಿ ಕೊಡದೆ ಸತಾಯಿಸಿತು. ನಿಮಗೆ ಅಕ್ಕಿ ಕೊಡಲು ಒಪ್ಪದ ಬಿಜೆಪಿಯವರು ಈಗ ನಿಮ್ಮ ಮತ ಕೇಳಲು ಬಂದಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ಬಡವರು, ಶ್ರಮಿಕರು, ಮಹಿಳೆಯರು, ರೈತರು, ಕಾರ್ಮಿಕರು, ಎಲ್ಲಾ ಜಾತಿ-ಎಲ್ಲಾ ಧರ್ಮದ ದುಡಿಯುವ ವರ್ಗಗಳ ಬದುಕಿಗೆ ನೆರಳಾಗುವ ಗ್ಯಾರಂಟಿಗಳನ್ನು, ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಬಿಜೆಪಿಯವರಂತೆ ಕೇವಲ ಶ್ರೀಮಂತರ ಸಾಲ ಮನ್ನಾ ಮಾಡಿ ಜನದ್ರೋಹದ ಕೆಲಸ ಮಾಡುವುದಿಲ್ಲ ಎಂದು ನುಡಿದರು.

ನಿಮಗೆ ಅಕ್ಕಿ ಕೊಡಲು ನಿರಾಕರಿಸಿದ್ದ ಬಿಜೆಪಿಯವರು ಈಗ ನಿಮ್ಮ ಮತ ಕೇಳಲು ಬರುತ್ತಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

Key words: Uttara Kannada, Congress, win, CM Siddaramaiah

Tags :

.