HomeBreaking NewsLatest NewsPoliticsSportsCrimeCinema

ವೆಜ್, ನಾನ್ವೆಜ್ ಮತ್ತು ಅನ್ನಪೂರಣಿ..!

06:10 PM Jan 06, 2024 IST | prashanth

ಬೆಂಗಳೂರು,ಜನವರಿ,6,2024(www.justkannada.in): ಅಡುಗೆ ಮಾಡೋದು ಒಂದು ಅದ್ಭುತ ಕಲೆ. ನನ್ನ ಪ್ರಕಾರ ಖುಷಿಯಿಂದ ಊಟ ಮಾಡೋದು ಅದಕ್ಕಿಂತ ದೊಡ್ಡ ಕಲೆ. ನಾನು ಅಡುಗೆ ಮಾಡೋದು ಕಲಿಯಲಾಗಲಿಲ್ಲ. ಆದರೆ ಖುಷಿಯಿಂದ ತಿನ್ನೋದನ್ನು ಮಾತ್ರ ಚೆನ್ನಾಗಿ ಕಲಿತಿದ್ದೇನೆ.

ಅಡುಗೆ ಮಾಡುವ ಮೋಹ ಇರುವವರೂ, ಅಡುಗೆ ಪಟ್ಟಾಗಿ ಹೊಡೆಯುವ ಸಾಮರ್ಥ್ಯ ಇರುವವರೂ ಒಟ್ಟಿಗೇ ಮೆಚ್ಚಿಕೊಳ್ಳಬಹುದಾದ ಸಿನಿಮಾ ತಮಿಳಿನ - ಅನ್ನಪೂರಣಿ. (Goddess of food)

ನಮ್ಮಲ್ಲಿ ವೆಜ್ ಮತ್ತು ನಾನ್ ವೆಜ್ ಕುರಿತ ಕೋಳಿ ಜಗಳ (ಬೇಕಿದ್ದರೆ ಬದನೆಕಾಯ್ ಜಗಳ ಅಂತಾದ್ರೂ ಅಂದ್ಕೊಳಿ) ಶತಮಾನಗಳಿಂದ ನಡೆಯುತ್ತಿದೆ. ವೆಜ್ ತಿನ್ನೋರು ಅಂದ್ರೆ ಕೇವಲ ತರಕಾರಿ ತಿನ್ನೋರು. ನಾನ್ ವೆಜ್ ತಿನ್ನೋರು ಅಂದ್ರೆ ಮೀನು, ಮಾಂಸ, ತರಕಾರಿಗಳನ್ನು ಸಮನಾಗಿ ತಿನ್ನುವವರು.

ಜಗತ್ತಿನಲ್ಲಿ ಬರೀ ಮಾಂಸ/ಮೀನು ತಿನ್ನುವವರು ಯಾರೂ ಇಲ್ಲ. ಹಾಗಾಗಿ ನಾನ್ ವೆಜ್ ಅನ್ನುವ ಪದ ಬಳಕೆಯೂ ತಪ್ಪು. ನಾನ್ ವೆಜ್ ಅಂದ್ರೆ ಅದರಲ್ಲಿ ವೆಜ್ ಕೂಡಾ ಒಳಗೊಂಡಿರುತ್ತದೆ. (ಆ ಶಬ್ದವನ್ನೇ ಗಮನಿಸಿ.)

ಇರಲಿ, ಇದರ ಬಗ್ಗೆ ಪ್ರಳಯ ದಿನದವರೆಗೂ ಜಗಳ ಮುಂದುವರಿಯುವುದು ಖಚಿತ ಆಗಿರೋದರಿಂದ, ಈಗ ಸಿನಿಮಾದ ವಿಷಯ ಮಾತನಾಡೋಣ.

"ಅನ್ನಪೂರಣಿ" ಮೂಲತಃ ತರುಣಿಯೊಬ್ಬಳ "ಕಾರ್ಪೊರೇಟ್ ಶೆಫ್ ಆಗಬೇಕೆಂಬ ಕನಸು" ಎದುರಿಸುವ ಸಂಕಷ್ಟಗಳ ಸರಮಾಲೆಯ ಕತೆ. ಆಕೆಯ ಕನಸಿಗೆ ಮೊದಲ ಶತ್ರುವೇ ಆಕೆಯ ಅಯ್ಯಂಗಾರ್ ಜಾತಿ. ಅದರ ಜೊತೆಗೆ ಆಕೆಯ ಅಪ್ಪ ದೇವಸ್ಥಾನ ವೊಂದರಲ್ಲಿ ಪ್ರಸಾದ ತಯಾರಿಸುವ ಶುದ್ಧ ಬ್ರಾಹ್ಮಣ. ಎಂಜಿನಿಯರ್ ಆಗಿ ಕೈತುಂಬ ಸಂಬಳವಿದ್ದ ಕೆಲಸವನ್ನು ಬಿಟ್ಟು ಖುಷಿಯಿಂದ ಅಡುಗೆ ಮಾಡುವ ಕಾಯಕದ ಬೆನ್ನು ಹತ್ತಿ ಬಂದವನಾತ. ಮಾಂಸ/ಮೀನುಗಳನ್ನು ಕಣ್ಣೆತ್ತಿ ನೋಡುವುದೂ ಧಾರ್ಮಿಕವಾಗಿ ಮಹಾಪಾಪ ಎಂದು ನಂಬಿ ಜೀವಿಸುವ ಸಜ್ಜನ.

ಇಂತಹ ಸಜ್ಜನ ಬ್ರಾಹ್ಮಣನ ಮಗಳು ಕಾರ್ಪೊರೇಟ್ ಶೆಫ್ ಆಗುವುದು ಸಾಧ್ಯವೇ? ಕೋಳಿ, ಕುರಿ ಮಾಂಸದ ಅಡುಗೆ ಮಾಡಿದರೆ ಅದರ ರುಚಿ ನೋಡಬೇಡವೇ? ರುಚಿ ನೋಡದೇ ಅಡುಗೆಯ ಗುಣಮಟ್ಟ ಗೊತ್ತಾಗುವುದು ಹೇಗೆ? ಇಂತಹ ಕೆಲಸವನ್ನು ಮನೆಯವರು ಒಪ್ಪುವುದಂತೂ ಸಾಧ್ಯವೇ ಇಲ್ಲ.!

ಇಲ್ಲಿಂದ ಶುರುವಾಗುವ ಕಥೆ ಹಲವು ತಿರುವುಗಳನ್ನು ಪಡೆಯುತ್ತಾ ಸಸ್ಪೆನ್ಸ್ ಥ್ರಿಲ್ಲರ್ ತರಹ ಸಾಗುತ್ತದೆ. ಮದುವೆ ಮನೆಯಿಂದ ಅನ್ನಪೂರಣಿ ತಪ್ಪಿಸಿಕೊಂಡು ಓಡಿ ಹೋಗುತ್ತಾಳೆ. ಅದೂ ಮುಸ್ಲಿಂ ಗೆಳೆಯನ ಜೊತೆಗೆ! ಥ್ರಿಲ್ಲರ್ ಗೆ ಸಾಥ್ ನೀಡಲೆಂದೇ ಅನ್ನಪೂರಣಿಯ ಮುಸ್ಲಿಂ ಗೆಳೆಯನ ಪಾತ್ರ ಬರುತ್ತದೆ! ಆಕೆಯ ಕನಸಿಗೆ ಗಟ್ಟಿಯಾಗಿ ಸಾಥ್ ನೀಡುವ ಈ ಪಾತ್ರ ಕಥೆಯ ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳಲು ಮುಖ್ಯ ಕೊಂಡಿಯಾಗುತ್ತದೆ. ಜೊತೆಗೆ ಖ್ಯಾತ ಶೆಫ್ ಗಳಾದ ಅಪ್ಪ- ಮಗ ಪಾತ್ರದ ನಡುವಣ ಪ್ರೇಮ- ಕೋಪಗಳ ತಾಕಲಾಟದ ಎಳೆಯೂ ಹೆಣೆದುಕೊಂಡಿದೆ.

ನಿರ್ದೇಶಕ ನೀಲೇಶ್ ಕೃಷ್ಣ, ತಮಿಳಿನಲ್ಲಿ ನಿರ್ದೇಶಿಸಿದ ಮೊದಲ ಚಿತ್ರವಿದು. ಮರಾಠಿಯಲ್ಲಿ ಒಂದು ಸಿನಿಮಾ ನಿರ್ದೇಶಿಸಿ, ತಮಿಳಿಗೆ ಕಾಲಿಟ್ಟ ನೀಲೇಶ್ ಇಡೀ ಚಿತ್ರವನ್ನು ಮಾಮೂಲಿ ಥ್ರಿಲ್ಲರ್ ಗಿಂತ ವಿಭಿನ್ನವಾಗಿ, ಜಿಹ್ವಾಪ್ರಪಂಚದ ತಾತ್ವಿಕ ಲೋಕಕ್ಕೂ ಇಣುಕಿ ನೋಡುವಂತೆ ಯಶಸ್ವಿಯಾಗಿ ತೆರೆಗೆ ತಂದಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆಗೆ ಕೆಲಸ ಮಾಡಿದ ಹಿನ್ನೆಲೆಯೂ ಇವರಿಗಿದೆ.

ಊಟವೆಂದರೆ ಬರೀ ಊಟವಲ್ಲ. ರುಚಿ, ವಾಸನೆ, ಚಯಾಪಚಯ ಕ್ರಿಯೆಯ ವಿಜ್ಞಾನ, ಜಾತಿ/ಧರ್ಮಮೂಲ ಪೂರ್ವಾಗ್ರಹಗಳ ಭಾವಲೋಕ, ಜೀವಜಾಲದ ಸಮತೋಲನನ, ಪಂಚೇಂದ್ರಿಯಗಳ ಸಮ್ಮಿಶ್ರ ಸಮರಸವೂ ಹೌದು. ಅಡುಗೆಯ ರುಚಿ ನೋಡುವುದು ಬರೀ ನಾಲಗೆ ಮಾತ್ರ ಅಲ್ಲ, ದೃಷ್ಟಿ, ಘ್ರಾಣ, ಸ್ಪರ್ಶ, ಬುದ್ಧಿ ಎಲ್ಲವೂ ಸೇರಿಯೇ ರುಚಿ ನೋಡುತ್ತದೆ! ಅದೇ ಒಂದು ಪ್ರತ್ಯೇಕ ಪ್ರಪಂಚ. ನಿರ್ದೇಶಕ ನೀಲೇಶ್ ಈ ಪಂಚೇಂದ್ರಿಯ ಪ್ರಪಂಚದ ಒಳ ಹೊರಗೆಲ್ಲವನ್ನೂ ಇಲ್ಲಿ ಹದವಾಗಿ ಬೇಯಿಸಿದ್ದಾರೆ.

ಚಿತ್ರದುದ್ದಕ್ಕೂ ಬಿಂಕ, ಬಿನ್ನಾಣಗಳ ಯಾವ ನೆರವೂ ಇಲ್ಲದೆ ಅದ್ಭುತ ಭಾವಾಭಿನಯ ಪ್ರದರ್ಶಿಸಿರುವ ನಯನತಾರಾ (ಆಕೆಯ 75ನೇ ಸಿನಿಮಾ ಇದು) ಒಂದೆಡೆ ಹೇಳುತ್ತಾರೆ:

"ಬಿರಿಯಾನಿ ಯನ್ನು ಜಾತಿ ಧರ್ಮದ ಬ್ರ್ಯಾಂಡ್ ನಲ್ಲಿ ಹೇಗೆ ನೋಡುತ್ತೀರಿ? ಬಿರಿಯಾನಿ ಅಂದರೆ emotions!"

ಸಿನಿಮಾದಲ್ಲಿ ಸತ್ಯರಾಜ್, ಜೈ, ಕಾರ್ತಿಕ್ ಕುಮಾರ್, ಕೆ.ಎಸ್.ರವಿಕುಮಾರ್ ಮುಂತಾಗಿ ತಮಿಳಿನ ಹಲವು ಸೂಪರ್ ಸ್ಟಾರ್ ಗಳಿದ್ದಾರೆ. ಆದರೆ ಚಿತ್ರ ಮುಗಿದ ಬಳಿಕವೂ ಕಾಡುವುದು ನಯನತಾರಾ ಮತ್ತು ಕನ್ನಡಿಗ ಅಚ್ಯುತ ಕುಮಾರ್ ಅವರ ಭಾವಪೂರ್ಣ ಅಭಿನಯ.

ಅಪ್ಪ- ಮಗಳಾಗಿ ಇವರಿಬ್ಬರ ಅಭಿನಯ ಕಣ್ಣಂಚನ್ನು ಹಲವು ಸಲ ತೇವಗೊಳಿಸುತ್ತದೆ. ಅಚ್ಯುತ ಅವರಂತೂ ಮಾತಿಗಿಂತ ಹೆಚ್ಚು ಮೌನದಲ್ಲೇ ವಿಜೃಂಭಿಸುತ್ತಾರೆ.

"ಅನಿಮಲ್" ಎನ್ನುವ ಪ್ರಾಣಿಪ್ರಿಯ ಹಿಂಸಾವಿನೋದಿಗಳನ್ನು ರಂಜಿಸಿದ ಸಿನಿಮಾದ ಜೊತೆಗೇ ಬಿಡುಗಡೆಯಾದ "ಅನ್ನಪೂರಣಿ" ಬಾಕ್ಸಾಫೀಸ್ ನಲ್ಲಿ ಅಷ್ಟಕ್ಕಷ್ಟೆ ಓಡಿದೆ. ಬಹುಶಃ ನಿರ್ಮಾಪಕರಿಗೆ ನಯನತಾರಾ ಕಾಲ್ ಶೀಟ್ ಗೆ ಕೊಟ್ಟ ಹಣಕ್ಕೆ ಹೋಲಿಸಿದರೆ ಲಾಭ ಕಡಿಮೆಯೇ ಬಂದಿರಬಹುದು.‌ ಆದರೆ ಊಟ/ತಿಂಡಿ/ಆಹಾರದ ಸುತ್ತ ಹೀಗೊಂದು ಕೌಟುಂಬಿಕ ಥ್ರಿಲ್ಲರ್ ಸಿನಿಮಾ ಎಂದು ಸಾಧಿಸಿದ ಹೆಗ್ಗಳಿಕೆಯಂತೂ ಈ ನಿರ್ಮಾಪಕರಿಗಿದೆ.

ಅದರಲ್ಲೂ, ವೆಜ್-ನಾನ್ ವೆಜ್ ಗಳ ಯಾವ ಮೇಲರಿಮೆ/ ಕೀಳರಿಮೆಯ ಜಗಳದ ಸನಿಹಕ್ಕೂ ಹೋಗದೆ ಮನುಷ್ಯಮಾತ್ರದ ಪ್ರೀತಿ ಮತ್ತು ಸಂಯಮದಿಂದ ಈ ಕಥೆಯನ್ನು ಕಟ್ಟಿಕೊಟ್ಟಿರುವ ನಿರ್ದೇಶಕ ನೀಲೇಶ್ ತಮಿಳು ಚಿತ್ರರಂಗಕ್ಕೆ ಗಟ್ಟಿ ಕೊಡುಗೆಯಾಗುವುದು ಖಚಿತ.

ಬಹಳ ಸಲ ನನಗೆ ಶುದ್ಧ ಶಾಖಾಹಾರಿ ಸ್ನೇಹಿತರನ್ನು ನೋಡಿ ಸಂಕಟ ಆಗುವುದಿದೆ. ಜಗತ್ತಿನ ಎಷ್ಟೊಂದು ರುಚಿಕರ/ ವೈವಿಧ್ಯಮಯ ಆಹಾರದಿಂದ ಇವರು ವಂಚಿತರಾಗಿದ್ದಾರಲ್ಲ... ಎಂದು! ಹಾಗೆಂದು ಇದನ್ನು ಗಟ್ಟಿಯಾಗಿ ಅವರ ಮುಂದೆ ಹೇಳುವುದೂ ಸಜ್ಜನಿಕೆಯಲ್ಲ. ಕೆಲವರಂತೂ ಹಾಗೆ ಹೇಳಿದರೆ, "ಹಿಚ್ಕಾಕ್" ಸಿನಿಮಾದ ಹೊಸ ಕತೆಗೇ ಕಾರಣರಾಗಬಹುದು!

ಕೃಪೆ..

ಬಿ.ಎಂ ಹನೀಫ್

Tags :
Non VegVeg
Next Article