ಕಟ್ಟಕಡೆಯ ಸಮಾಜಕ್ಕೆ ಮೊಟ್ಟಮೊದಲ ಅವಕಾಶ – ಸಚಿವ ಡಾ. ಹೆಚ್.ಸಿ ಮಹದೇವಪ್ಪ.
ಬೆಂಗಳೂರು,ಜನವರಿ,31,2024(www.justkannada.in): ಇತಿಹಾಸದಲ್ಲೇ ಮೊದಲ ಬಾರಿಗೆ 101 ಶೋಷಿತ ಸಮುದಾಯಗಳ ಪಟ್ಟಿಯಲ್ಲಿ ಕೊನೆಯ ಹೆಸರಾಗಿ ಗುರುತಿಸಿಕೊಂಡಿರುವ ಸಫಾಯಿ ಕರ್ಮಚಾರಿಗಳ ಬದುಕಿಗೆ ನೇರವಾಗಿ ಹಣಕಾಸಿನ ನೆರವನ್ನು ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರು ಚಾಲನೆ ನೀಡಿದರು.
ಇಂದು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸುಮಾರು 4000 ಮಂದಿ ಸಫಾಯಿ ಕರ್ಮಚಾರಿಗಳಿಗೆ ತಲಾ ನಲವತ್ತು ಸಾವಿರ ರೂಪಾಯಿಗಳ ನೇರ ಚೆಕ್ ಅನ್ನು ವಿತರಿಸಲಾಯಿತು.
ಸಮಾಜದ ಸ್ವಚ್ಛತೆ ಮಾಡುವ ಜನರಿಗೆ ಅಗತ್ಯ ಸೌಲಭ್ಯ ನೀಡಬೇಕಾದ್ದು ನಾಗರೀಕ ಸಮಾಜದ ಜವಾಬ್ದಾರಿ ಆಗಿದ್ದು ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರವು ಸಫಾಯಿ ಕರ್ಮಚಾರಿಗಳ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಅವರಿಗೆ ನೇರವಾಗಿ ಸಹಾಯ ಮಾಡುವ ನಿರ್ಧಾರವನ್ನು ಕೈಗೊಂಡಿದ್ದು ರಾಜ್ಯದ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ಬೆಳವಣಿಗೆ ಆಗಿದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಕಟ್ಟ ಕಡೆಯ ಸಮಾಜಕ್ಕೆ ನಮ್ಮ ಸರ್ಕಾರದ ವತಿಯಿಂದ ಮೊಟ್ಟ ಮೊದಲನೆಯದಾಗಿ ಅವರ ಸೇವೆಯನ್ನು ಗೌರವಿಸಲು ಅವರಿಗೆ ಅಗತ್ಯವಾದ ಸೌಲಭ್ಯವನ್ನು ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ನುಡಿದರು.
ಮಿಂಚಿದ ಸಂವಿಧಾನ ಪೀಠಿಕೆ ಓದಿದ ಬಾಲಕ.
ಇತ್ತೀಚಿನ ಸಂವಿಧಾನ ಜಾಗೃತಿಯ ಭಾಗವಾಗಿ ಶಾಲೆಯಲ್ಲಿ ಸಂವಿಧಾನದ ಪೀಠಿಕೆಯನ್ನು ನೋಡಿಕೊಳ್ಳದೇ ತಪ್ಪಿಲ್ಲದ ಹಾಗೆ ವಾಚಿಸಿದ ಪುಟ್ಟ ಬಾಲಕನನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಎತ್ತಿಕೊಂಡು, ಜೈ ಭೀಮ್ ಘೋಷಣೆ ಕೂಗುವ ಮೂಲಕ ಸನ್ಮಾನಿಸಿದ್ದು ಇಡೀ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಬಸಂತಪ್ಪ, ನರೇಂದ್ರಸ್ವಾಮಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
Key words: very first -opportunity – marginalized- society - Minister -Dr. HC Mahadevappa