ಮುಂದೊಂದು ದಿನ ವಿಧಾನಸೌಧವನ್ನೇ ಅಡವಿಟ್ಟರೂ, ಹರಾಜು ಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ- ಸಿಎಂ ವಿರುದ್ದ ಆರ್.ಅಶೋಕ್ ಗುಡುಗು
ಬೆಂಗಳೂರು,ಜೂನ್,18,2024 (www.justkannada.in): ಅಸಮರ್ಥ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಪಾಪರ್ ಸರ್ಕಾರವನ್ನ ಉಳಿಸಿಕೊಳ್ಳಲು 25,000 ಎಕರೆ ಸಾರ್ವಜನಿಕ ಆಸ್ತಿಯನ್ನ ಬಳಸಿಕೊಳ್ಳಲು ಹೊರಟಿದ್ದೀರಲ್ಲ, ಮುಂದೊಂದು ದಿನ ತಾವು ವಿಧಾನಸೌಧವನ್ನೇ ಅಡ ಇಟ್ಟರೂ, ಹರಾಜು ಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಟ್ವಿಟ್ಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ವಿಪಕ್ಷನಾಯಕ ಆರ್.ಅಶೋಕ್ ಗುಡುಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, 15 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ತಮಗೆ ರಾಜ್ಯದ ಬಜೆಟ್ ಮಂಡಿಸುವಾಗ ಸರ್ಕಾರದ ಆದಾಯ, ವೆಚ್ಚದ ಬಗ್ಗೆ ಜ್ಞಾನವಿರಲಿಲ್ಲವೇ? ಬಜೆಟ್ ಮಂಡಿಸಿದ ನಾಲ್ಕೇ ತಿಂಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸಿದ್ದಾಯ್ತು, ಈಗ 25,000 ಎಕರೆ ಸಾರ್ವಜನಿಕ ಆಸ್ತಿಯನ್ನ ಸಂಪನ್ಮೂಲ ಕ್ರೂಢೀಕರಣಕ್ಕೆ ಬಳಸಿಕೊಳ್ಳಲು ಹೊರಟಿದ್ದೀರಲ್ಲ, ಇದೇನಾ ಬಜೆಟ್ ರಚನೆ ಬಗ್ಗೆ ತಮಗಿರುವ ಪಾಂಡಿತ್ಯ? ಇದೇನಾ ತಾವು ಜಂಭ ಕೊಚ್ಚಿಕೊಳ್ಳುವ ಬುದ್ಧಿವಂತಿಕೆ? ಎಂದು ಚಾಟಿ ಬೀಸಿದ್ದಾರೆ.
ಕರ್ನಾಟಕದಂತಹ ಪ್ರಗತಿಶೀಲ ರಾಜ್ಯವನ್ನ ಇಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೀರಲ್ಲ, ತಮಗೆ ನಿಜಕ್ಕೂ ನಾಚಿಕೆಯಾಗಬೇಕು. ಸನ್ಮಾನ್ಯ ದೇವೇಗೌಡರಿಂದ ಹಿಡಿದು ಈಗ ಡಿಸಿಎಂ ಡಿಕೆ ಶಿವಕುಮಾರ್ ಅವರವರೆಗೆ ಅನೇಕರ ಕೃಪೆಯಿಂದ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ, ಮಂತ್ರಿಯಾಗಿ ಹತ್ತಾರು ವರ್ಷ ಅಧಿಕಾರ ಅನುಭವಿಸಿದ್ದೀರಲ್ಲ, ಕರ್ನಾಟಕಕ್ಕೆ, ಕನ್ನಡಿಗರಿಗೆ ತಮ್ಮ ಕೊಡುಗೆ ಏನು? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಪ್ರತ್ಯೇಕ ಧರ್ಮ, ಭಾಷೆ, ಜಾತಿ, ಉತ್ತರ-ದಕ್ಷಿಣ, ಕೇಂದ್ರ-ರಾಜ್ಯ, ಅಲ್ಪಸಂಖ್ಯಾತರ ಓಲೈಕೆ ಅಂತ ಜನರನ್ನ ದಿಕ್ಕು ತಪ್ಪಿಸಿ, ಜೀವನದುದ್ದಕ್ಕೂ ಯಾರಿಗೋ ಸಿಕ್ಕ ಜನಾದೇಶವನ್ನ ಕಸಿದುಕೊಂಡು ಅಧಿಕಾರ ಅನುಭವಿಸಿದ್ದೊಂದೇ ನಿಮ್ಮ ಸಾಧನೆ. ಕರ್ನಾಟಕಕ್ಕೆ ತಮ್ಮ ಕೊಡುಗೆ ಏನಪ್ಪಾ ಅಂದರೆ ಶೂನ್ಯ, ದೊಡ್ಡ ಶೂನ್ಯ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
Key words: Vidhan soudha, R.Ashok, against, CM Siddaramaiah