ಬಾಂಗ್ಲಾದಲ್ಲಿ ಹಿಂಸಾಚಾರ: ದೇವಾಲಯಗಳ ಮೇಲೆ ದಾಳಿ: ವಿದೇಶಾಂಗ ಸಚಿವ ಜೈಶಂಕರ್ ವಿವರಣೆ
ನವದೆಹಲಿ,ಆಗಸ್ಟ್,6,2024 (www.justkannada.in): ಬಾಂಗ್ಲಾದೇಶದಲ್ಲಿ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ ಬಳಿಕ ಹಿಂಸಾಚಾರ ತೀವ್ರ ಸ್ವರೂಪಕ್ಕೆ ತಿರುಗಿದ್ದು, ರಾಜಕೀಯ ಬಿಕ್ಕಟ್ಟಿನ ಸಂದರ್ಭದ ಅವಕಾಶವನ್ನು ಬಳಸಿಕೊಂಡ ಪ್ರತಿಭಟನಾಕಾರರು ಹಿಂದೂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಹಿಂಸಾಚಾರ ನಡೆಸಿದ್ದಾರೆ. ಈ ಮಧ್ಯೆ ಉದ್ರಿಕ್ತರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿ, ಹಿಂದೂಗಳ ಮನೆಗಳನ್ನು ಲೂಟಿ ಮಾಡಿರುವುದಾಗಿ ವರದಿಯಾಗಿದೆ.
ಬಾಂಗ್ಲಾದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈ ಶಂಕರ್ ವಿವರಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು, ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ದೇವಾಲಯಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ದಾಳಿಯಿಂದ ಅಲ್ಲಿನ ಅಲ್ಪಸಂಖ್ಯಾತರು ಭೀತಿಗೊಳಗಾಗಿದ್ದಾರೆ. ಬಾಂಗ್ಲಾದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಾಂಗ್ಲಾಕ್ಕೆ ಪ್ರವಾಸಕ್ಕೆ ತೆರಳದಂತೆ ನಿರ್ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತ ಶಾಂತಿಯನ್ನ ಬಯಸುತ್ತದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದಲ್ಲಿ 19 ಸಾವಿರ ಭಾರತೀಯರಿದ್ದರು. ಬಹುತೇಕ ಭಾರತೀಯರು ದೇಶಕ್ಕೆ ಮರಳಿದ್ದಾರೆ. ಅಲ್ಲಿನ ಹಿಂದೂಗಳು ಭಾರತಕ್ಕೆ ಬರಲು ಉತ್ಸುಕರಾಗಿದ್ದಾರೆ. ನಾವು ಬಾಂಗ್ಲಾ ಸೈನಿಕರ ಸಂಪರ್ಕದಲ್ಲಿದ್ದೇವೆ. ಭಾರತವು ನೆರೆಯ ರಾಷ್ಟ್ರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಇನ್ನೂ ವಿಕಸನಗೊಳ್ಳುತ್ತಿದೆ, ಅಲ್ಲಿನ ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇನೆ" ಎಂದು ಎಸ್ ಜೈಶಂಕರ್ ತಿಳಿಸಿದ್ದಾರೆ.
Key words: Violence, Bangladesh, Foreign Minister, Jaishankar