For the best experience, open
https://m.justkannada.in
on your mobile browser.

VTU: ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ..!

10:33 AM May 31, 2024 IST | prashanth
vtu  ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ

ಬೆಳಗಾವಿ,ಮೇ,31,2024 (www.justkannada.in): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 25 ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆಯನ್ನು ಮಾಡಿದೆ. ವಿವಿಧ ಕೋರ್ಸ್‌ಗಳ ಪರೀಕ್ಷೆ ಮುಗಿಸಿದ ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ, ವಿಶಿಷ್ಟ ದಾಖಲೆ ಮಾಡಿದೆ.

ಗುರುವಾರ (ಮೇ 30) ಅಂತಿಮ ವರ್ಷದ ಬಿಇ, ಬಿ.ಟೆಕ್., ಬಿ.ಆರ್ಕ್, ಬಿ.ಪ್ಲಾನ್ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆದವು. ಒಟ್ಟು 42,323 ವಿದ್ಯಾರ್ಥಿಗಳು ಹಾಜರಾಗಿ, ಸಂಜೆ 5.30ಕ್ಕೆ ಪರೀಕ್ಷೆ ಮುಗಿದವು. ರಾತ್ರಿ 8.30ಕ್ಕೆ ಎಲ್ಲ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಎಲ್ಲ ವಿದ್ಯಾರ್ಥಿಗಳ ವಾಟ್ಸ್ ಆ್ಯಪ್ ಸಂಖ್ಯೆಗೆ ಫಲಿತಾಂಶ ರವಾನಿಸಲಾಗಿದೆ.

'ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ 25 ವರ್ಷಗಳ ಇತಿಹಾಸದಲ್ಲೇ ಇದು ದಾಖಲೆಯ ದಿನ. ಇಂಥ ಪ್ರಯೋಗ ಹಿಂದೆ ಎಲ್ಲಿಯೂ ಆಗಿಲ್ಲ. ಪರೀಕ್ಷೆ ಮುಗಿದ ದಿನವೇ ಎಲ್ಲ 42,323 ವಿದ್ಯಾರ್ಥಿಗಳ ಫಲಿತಾಂಶವನ್ನೂ ನೀಡಿದ್ದೇವೆ' ಎಂದು ವಿಟಿಯು ಕುಲಪತಿ ಪ್ರೊ. ಎಸ್‌.ವಿದ್ಯಾಶಂಕರ ತಿಳಿಸಿದ್ದಾರೆ.

ಫಲಿತಾಂಶವನ್ನು ಬೇಗ ಪ್ರಕಟಿಸುವುದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ವಿಭಾಗದಲ್ಲಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ಭವಿಷ್ಯಕ್ಕೆ ತುಂಬಾ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿಟಿಯುದಲ್ಲಿ ಆಡಳಿತ. ಶೈಕ್ಷಣಿಕ, ಪರೀಕ್ಷೆ, ಸಂಶೋಧಾನಾ ವಿಭಾಗದಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದು ಈ ಸಾಧನೆಯನ್ನು ಮಾಡಿದೆ ಎಂದು ಕುಲಪತಿ ವಿದ್ಯಾಶಂಕರ್ ತಿಳಿಸಿದರು.

“ವಿಟಿಯು ವ್ಯಾಪ್ತಿಗೆ ಒಳಪಟ್ಟ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಈ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ಜತೆಗೆ, ಎಲ್ಲ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳು ಪ್ರೊವಿಜನಲ್ ಪದವಿ ಸರ್ಟಿಫಿಕೇಟ್‌ಗಳನ್ನು (ಪಿಡಿಸಿ) ಜೂನ್ 3ರಿಂದ ಆನ್‌ಲೈನ್ ಮೂಲಕ ನೀಡಲಾಗುವುದು' ಎಂದು ತಿಳಿಸಿದರು.

'ಈ ಹಿಂದೆ ಪರೀಕ್ಷೆ ಮುಗಿಸಿದ ಬಳಿಕ ಫಲಿತಾಂಶಕ್ಕೆ ಎರಡು ತಿಂಗಳಿಗೂ ಹೆಚ್ಚು ಸಮಯ ಕಾಯಬೇಕಿತ್ತು. ತಾಂತ್ರಿಕ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಏಳು ದಿನಗಳಲ್ಲಿ ಫಲಿತಾಂಶ ನೀಡುವಂತೆ ಮಾಡಿದ್ದೆ. ಆದರೆ, ಈಗ ಒಂದು ದಿನವೂ ಕಾಯಬೇಕಿಲ್ಲ. ಫರೀಕ್ಷೆ ಮುಗಿದ ಮೂರೇ ಗಂಟೆಯಲ್ಲಿ ಅವರ ಕೈಗೆ ಫಲಿತಾಂಶ ಕೊಟ್ಟಿದ್ದೇವೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸ್ಕ್ಯಾನಿಂಗ್ ಕೇಂದ್ರ, ಮೌಲ್ಯಮಾಪನ ಕೇಂದ್ರಗಳ ಸಂಖ್ಯೆ ಹೆಚ್ಚಿಸಲಾಗಿದೆ. ಎಲ್ಲ ಪ್ರಾಧ್ಯಾಪಕರಿಗೂ ಮೌಲ್ಯಮಾಪನ ಕಡ್ಡಾಯ ಮಾಡಲಾಗಿದೆ. ಇದರಿಂದ ಒಂದೇ ದಿನದಲ್ಲಿ ಫಲಿತಾಂಶ ನೀಡಲು ಸಾಧ್ಯವಾಗಿದೆ' ಎಂದು ವಿದ್ಯಾಶಂಕರ್ ನುಡಿದರು.

Key words: VTU, Record, announce, results, 3 hours

Tags :

.