ವೈನಾಡುವಿನ ಮಳೆ ಎಫೆಕ್ಟ್: ಅಪಾಯದ ಅಂಚಿನಲ್ಲಿ ನಂಜನಗೂಡು?
ಮೈಸೂರು,ಜುಲೈ,2024 (www.justkannada.in): ಕಬಿನಿ ನದಿ ಪಾತ್ರವಾದ ಕೇರಳ ವೈನಾಡುವಿನಲ್ಲಿ ಮಳೆಯ ರುದ್ರ ನರ್ತನದಿಂದಾಗಿ ಕಪಿಲಾ ನದಿಯು ಉಕ್ಕಿ ಹರಿಯುತ್ತಿರುವ ಪರಿಣಾಮ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನದಿಯು ಸಾಗರೋಪಾದಿಯಲ್ಲಿ ತುಂಬಿ ಹರಿಯುತ್ತಿದೆ.
ಪಟ್ಟಣದ ಮಲ್ಲನ ಮೂಲೆ ಮಠದ ಬಳಿ ಮೈಸೂರು ನಂಜನಗೂಡು ಹೆದ್ದಾರಿ ರಸ್ತೆಯು ಮುಳುಗಡೆಯಾಗಿದ್ದು ಈ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಿ ಬದಲಿ ರಸ್ತೆ ಸಂಚಾರ ಕಲ್ಪಿಸಲಾಗಿದೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಪಿಲಾ ನದಿ ಪ್ರವಾಹದಿಂದಾಗಿ ಮಲ್ಲನ ಮೂಲೆ ಮಠವೂ ಸೇರಿದಂತೆ ಕಪಿಲಾ ನದಿ ತೀರದಲ್ಲಿರುವ ಶ್ರೀ ಬಸವೇಶ್ವರ, ಲಿಂಗಭಟರ ಗುಡಿ, ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಅಯ್ಯಪ್ಪ ಸ್ವಾಮಿ, ದತ್ತಾತ್ರೇಯ ಸ್ವಾಮಿ, ಹಾಗೂ ಪರಶುರಾಮ ದೇವಾಲಯಗಳು ಸಂಪೂರ್ಣ ಜಲಾವೃತಗೊಂಡಿವೆ ಅಲ್ಲದೆ ಐತಿಹಾಸಿಕ 16 ಕಾಲು ಮಂಟಪ ಮತ್ತು ಹಳೆಯ ವೆಲ್ಲೆಸ್ಲಿ ಸೇತುವೆ ಭಾಗಶಃ ಮುಳುಗಡೆಯಾಗಿದೆ ಇನ್ನು ತಗ್ಗು ಪ್ರದೇಶದ ಸಾವಿರಾರು ಎಕರೆ ಜಮೀನುಗಳು ಸ್ಮಶಾನಗಳು ಕೂಡ ನದಿ ಪ್ರವಾಹದಿಂದ ಮುಳುಗಡೆಯಾಗಿವೆ.
ಹಾಗೆಯೇ ದೇವಾಲಯದ ಸುತ್ತಮುತ್ತ ಮುಡಿಕಟ್ಟೆ, ಸೋಪಾನಕಟ್ಟೆ, ದಾಸೋಹ ಭವನ ಸೇರಿದಂತೆ ದೇವಸ್ಥಾನದ ಪಾರ್ಕಿಂಗ್ ಮತ್ತು ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀಕಂಠೇಶ್ವರ ಮಂಗಳಮಂಟಪ, ಕಲ್ಯಾಣ ಮಂಟಪ ಮತ್ತು ಹಳ್ಳದಕೇರಿಯಲ್ಲಿ ಕೆಲವು ವಾಸದ ಮನೆಗಳು ಕೂಡ ಜಲಾವೃತಗೊಂಡಿವೆ. ವೈನಾಡುವಿನಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ನಂಜನಗೂಡು ಪಟ್ಟಣಕ್ಕೂ ನೀರು ನುಗ್ಗುವ ಭೀತಿ ಎದುರಾಗಲಿದೆ . ಪ್ರವಾಹದ ಮುನ್ನೆಚ್ಚರಿಕೆಯಿಂದ ನಂಜನಗೂಡು ತಾಲೂಕು ಆಡಳಿತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಎಲ್ಲ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಧಾರಾಕಾರ ಮಳೆಗೆ ಕಾವೇರಿ ಕೊಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಬಣ
ಮಳೆಯ ಆರ್ಭಟಕ್ಕೆ ಕಾವೇರಿ ಕೊಳ್ಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಕಾವೇರಿ ನದಿ ನೀರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ತಾಲೂಕಿನ ಮುತ್ತಿನಮುಳಸೋಗೆ ಗ್ರಾಮದಲ್ಲಿ ರೈತರ ಜಮೀನು, ರಸ್ತೆಗಳು ಜಲಾವೃತವಾಗಿದೆ. ಅಪಾರ ಪ್ರಮಾಣದ ಬೆಳೆ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದ್ದು, ಕ್ಷಣ ಕ್ಷಣಕ್ಕೂ ಪ್ರವಾಹದ ನೀರು ಹೆಚ್ಚುತ್ತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನತೆ ಆತಂಕಕ್ಕೀಡಾಗಿದ್ದಾರೆ.
Key words: Waynadu, Rain effect, Nanjangudu, danger