HomeBreaking NewsLatest NewsPoliticsSportsCrimeCinema

DL ಇಲ್ಲದೆ ವಾಹನ ಚಾಲನೆ, ಅಪಘಾತ ಹೆಚ್ಚಳ: ತಪಾಸಣೆ ನಡೆಸಿ ಕ್ರಮಕ್ಕೆ ಸೂಚಿಸಿ- ಸಿಎಂಗೆ ರಮೇಶ್ ಬಾಬು ಮನವಿ

06:31 PM Aug 08, 2024 IST | prashanth

ಬೆಂಗಳೂರು,ಆಗಸ್ಟ್,8,2024 (www.justkannada.in):  ಬೆಂಗಳೂರಿನ  ಬಿಬಿಎಂಪಿಯ ವ್ಯಾಪ್ತಿಯಲ್ಲಿ ಚಾಲನಾ ಪರವಾನಿಗಿ (DL ) ಇಲ್ಲದೆ ಲಾರಿ ಚಾಲಕರು  ಅಪಘಾತಗಳನ್ನು ಎಸಗುತ್ತಿರುವುದು ಕಂಡು ಬರುತ್ತಿದ್ದು ಹೀಗಾಗಿ  ಲಾರಿ ಮತ್ತು ಸರಕು ಸಾಗಾಣಿಕೆಯ ಹಾಗೂ ಕಸದ ಲಾರಿಗಳ ಚಾಲಕರ ಚಾಲನಾ ಪತ್ರವನ್ನು  (DL) ಕಡ್ಡಾಯವಾಗಿ ಮತ್ತು ನಿರಂತರವಾಗಿ ತಪಾಸಣೆ ಮಾಡಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮನವಿ ಮಾಡಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ರಮೇಶ್ ಬಾಬು,  ದಿನಾಂಕ 07-08-2024 ರಂದು ಬೆಂಗಳೂರಿನ ಡಾಬಸ್ ಪೇಟೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮತ್ತು ಗರ್ಭದೊಳಗೆ ಇದ್ದ ಮಗು ಮೃತ ಪಟ್ಟಿದ್ದು, ಟಿಪ್ಪರ್ ಲಾರಿಯ  ಚಾಲಕ ಪರಾರಿಯಾಗಿರುತ್ತಾನೆ. ಒಂದು ವಾರದ ಹಿಂದೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಇಂಜಿನಿಯರ್ ಗಳು ಮೃತ ಪಟ್ಟಿದ್ದು, ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿಯಾಗಿರುತ್ತಾನೆ. ಇತ್ತೀಚಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರ ಚಾಲನಾ ಪರವಾನಗಿ ಇರುವುದಿಲ್ಲ.

ಬೆಂಗಳೂರಿನಲ್ಲಿ ಕಸ ಸಾಗಾಣೆ ಮಾಡುವ ಲಾರಿಗಳು, ವಾಣಿಜ್ಯ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಳ ಸಾಗಾಣೆಗೆ ಬಳಸಿಕೊಳ್ಳುವ ಬಹುತೇಕ ಲಾರಿಗಳ ಚಾಲಕರಿಗೆ, ಕಟ್ಟಡ ಮತ್ತು ಇತರೆ  ಕಾಮಗಾರಿಗಳಲ್ಲಿ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್ ಗಳ  ಚಾಲಕರಿಗೆ ಚಾಲನಾ ಅನುಮತಿ ಪತ್ರವೇ  ಇರುವುದಿಲ್ಲ.

ಕುಡಿದು ವಾಹನಗಳನ್ನು ಚಾಲನೆ ಮಾಡುವುದು, ಅತೀ ವೇಗದ ಚಾಲನೆ, ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಕಡಿಮೆ ವೇತನ ನೀಡಿ ಅಸಮರ್ಥ ಚಾಲಕರನ್ನು ಬಳಸಿಕೊಳ್ಳುವ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ರಸ್ತೆ ಅಪಘಾತಗಳು ನಡೆಯುತ್ತಿದೆ.  ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಆದುದರಿಂದ ತಾವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಲಾರಿ ಮತ್ತು ಸರಕು ಸಾಗಾಣಿಕೆಯ ಹಾಗೂ ಕಸದ ಲಾರಿಗಳ ಚಾಲಕರ ಚಾಲನಾ ಪತ್ರವನ್ನು  (DL) ಕಡ್ಡಾಯವಾಗಿ ಮತ್ತು ನಿರಂತರವಾಗಿ ತಪಾಸಣೆ ಮಾಡಲು ಸೂಚಿಸಬೇಕಾಗಿ ಕೋರುತ್ತೇನೆ. ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ರಮೇಶ್ ಬಾಬು ಮನವಿ ಮಾಡಿದ್ದಾರೆ.

Key words: without, DL, accidents, Ramesh Babu, CM Siddaramaiah

Tags :
accidents.CM SiddaramaiahDLRamesh Babuwithout
Next Article