ಮೈಸೂರಿನಲ್ಲಿ ಸೆ.27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಸಕಲ ಸಿದ್ದತೆ
ಮೈಸೂರು, ಸೆಪ್ಟಂಬರ್,18, 2024 (www.justkannada.in): ಪ್ರವಾಸೋದ್ಯಮ ಮತ್ತು ಶಾಂತಿ' ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್ 27ರಂದು ಬೆಳಗ್ಗೆ 10 ಗಂಟೆಗೆ ಮೈಸೂರು ಅರಮನೆಯ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಅವರು ತಿಳಿಸಿದರು.
ಇಂದು ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ನಡೆದ, ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಎಂ.ಕೆ.ಸವಿತಾ ಅವರು ಮಾತನಾಡಿದರು.
ಶಾಂತಿ ಹಾಗೂ ಭದ್ರತೆ ಇರುವಂತಹ ರಾಷ್ಟ್ರಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಕಾರ್ಯಕ್ರಮದಲ್ಲಿ ಸರ್ವಧರ್ಮದ ಜನರನ್ನು ಒಳಗೊಂಡು ಅಂದು ಕಾರ್ಯಕ್ರಮದಲ್ಲಿ ಮೆರವಣಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಘಾಟನೆಯ ನಂತರ ಅರಮನೆಯಿಂದ ಹೈವೆ ಸರ್ಕಲ್ ವರೆಗೆ ಮೆರವಣಿಗೆಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಗಜಪಡೆ, ಪೊಲೀಸ್ ಬ್ಯಾಂಡ್, ನಾದಸ್ವರ, ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ, ಕೊಡವ ನೃತ್ಯ ,ಟಿಬೇಟಿಯನ್ ನೃತ್ಯ ಹಾಗೂ ಕೇರಳ ಚೆಂಡೆ ಸೇರಿದಂತೆ ಇನ್ನಿತರ ಕಲಾತಂಡಗಳ ಪ್ರದರ್ಶನ ಸೇರಿದಂತೆ ಪ್ರವಾಸಿಗರ ಗಮನ ಸೆಳೆಯುವಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಾಂತಿಯ ಸಂಕೇತವಾದ ಬಿಳಿ ವಸ್ತ್ರವನ್ನು ಧರಿಸಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳು ಹಾಗೂ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮತ್ತು ಭಾಗವಹಿಸುವ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್ ಸೈಟ್ ಅನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ .ಸಿ ಮಹದೇವಪ್ಪ ಅವರು ಅನಾವರಣಗೊಳಿಸಲಿದ್ದಾರೆ ಎಂದು ಎಂ.ಕೆ.ಸವಿತಾ ಅವರು ಹೇಳಿದರು.
ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ
ಸೆಪ್ಟಂಬರ್ 27 ರಂದು ನಡೆಯುವ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಚಿತ್ರೀಸಿ ಇನ್ಸ್ಟಾಗ್ರಾಮ್ ರೀಲ್ಸ್ ಆಗಿ ಅಪ್ಲೋಡ್ ಮಾಡಿ, ನಂತರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ visit_mysuru ಅನ್ನು ಟ್ಯಾಗ್ ಮಾಡಬೇಕು. ಅದರಲ್ಲಿ ನಿಗದಿತ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಒಂದು ವಿಡಿಯೋ ಹಾಗೂ ಉತ್ತಮ ಕಂಟೆಂಟ್ ಇರುವ ಒಂದು ವಿಡಿಯೋಗೆ ಅಕ್ಟೋಬರ್ 5 ರಂದು ಅರಮನೆ ಮೈದಾನದಲ್ಲಿ ನಡೆಯುವ ದಸರಾ ವೇದಿಕೆಯಲ್ಲಿ ಬಹುಮಾನವನ್ನು ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಸುಬ್ರಮಣ್ಯ, ಕರ್ನಾಟಕ ದಸರಾ ವಸ್ತುಪ್ರದರ್ಶನದ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ. ಕೆ ಹರೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಮೈಸೂರು ಟ್ರಾವಲ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಜಯಪ್ರಕಾಶ್ ರಾಜೇ ಅರಸ್, ಸ್ಕಾಲ್ ಇಂಟರ್ ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಟೂರಿಸ್ಟ್ ಗೈಡ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಎಸ್.ಜೆ.ಅಶೋಕ್, ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜು, ಡಿ.ದೇವರಾಜು ಅರಸು ರಸ್ತೆ ಅಂಗಡಿ ಮಾಲೀಕರ ಹಾಗೂ ಬಾಡಿಗೆದಾರರು ಸಂಘದ ಅಧ್ಯಕ್ಷರಾದ ಪ್ರಕಾಶ್ ಕೆ.ಜಿ. , ಹೋಟೆಲ್ ಜೇಡ್ ಗಾರ್ಡ್ ನ್ ಭರತ್ ಗೌಡ, ಅರೋಹಿ ಹೋಟೆಲ್ ನ ಸಮರ್ಥ್ ವೈದ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: World Tourism Day, celebrations, Mysore, September 27