ಯತ್ನಾಳ್ 40 ಸಾವಿರ ರೂ.ಕೋಟಿ ಹಗರಣ ಆರೋಪ: ಬಿಜೆಪಿ ನಾಯಕರ ಮೌನ ಪ್ರಶ್ನೆ ಮಾಡಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್.
ಬೆಂಗಳೂರು,ಡಿಸೆಂಬರ್,28,2023(www.justkannada.in): ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ ಹಗರಣ ನಡೆದಿದೆ ಎಂದು ತಮ್ಮ ಪಕ್ಷದ ಪ್ರಮುಖ ನಾಯಕರ ವಿರುದ್ಧವೇ ಗಂಭೀರ ಆರೋಪ ಮಾಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಹಗರಣ. ಯತ್ನಾಳ್ ಬಿಜೆಪಿಯ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರು. ಅವರ ಯಾವ ಹೇಳಿಕೆಯನ್ನೂ ಲಘುವಾಗಿ ಪರಿಗಣಿಸುವಂತಿಲ್ಲ. ಪ್ರತಿಯೊಂದಕ್ಕೂ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಬಿಜೆಪಿ ನಾಯಕರು ಯತ್ನಾಳ್ ಆರೋಪಕ್ಕೆ ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಮ್ಮ ಶೇ.40 ಕಮಿಷನ್ ಆರೋಪಕ್ಕೆ ಯತ್ನಾಳ್ ಅವರೇ ಸಾಕ್ಷಿ ಒದಗಿಸಿದ್ದಾರೆ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿಯವರ ತನ್ನನ್ನು ಚೌಕಿದಾರ ಎಂದು ಬಣ್ಣಿಸಿಕೊಳ್ಳುತ್ತಾರೆ. “ನಾ ಖಾವೂಂಗ, ನಾ ಖಾನೆಧೂಂಗ ಎಂಬುದು ಕೇವಲ ಬಾಯಿ ಹೇಳಿಕೆಗೆ ಸೀಮಿತವಾಗಬಾರದು. ನಿಮ್ಮದೇ ಪಕ್ಷದ ನಾಯಕ ಇಷ್ಟು ಗಂಭೀರ ಆರೋಪ ಮಾಡಿದ್ದರೂ ತನಿಖೆಗೆ ಕೇಂದ್ರ ಸರ್ಕಾರವೇ ಆದೇಶ ಮಾಡಬಹುದಿತ್ತಲ್ಲವೇ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಯತ್ನಾಳ್ ಅವರು ಭ್ರಷ್ಟಾಚಾರವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಇಚ್ಛಾಶಕ್ತಿ ಇದ್ದರೆ ಅವರು ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಹಿಟ್ ಅಂಡ್ ರನ್ ಮಾಡಿದಂತಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸದಂತೆ, ಲೋಕಸಭಾ ಚುನಾವಣೆಯಲ್ಲೂ ಬುದ್ದಿವಂತ ಕನ್ನಡಿಗರು ಬಿಜೆಪಿಗೆ ಮುಟ್ಟಿ ನೋಡಿಕೊಳ್ಳುವಂತಹ ಪಾಠ ಕಲಿಸುವುದು ಶತಃ ಸಿದ್ದ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಎಚ್ಚರಿಸಿದ್ದಾರೆ.
Key words: Yatnal- 40 thousand- Rs. Crore- scam –allegation-Minister-Sharan Prakash Patil.