For the best experience, open
https://m.justkannada.in
on your mobile browser.

ಬಿಎಸ್ ವೈ ವಿರುದ್ದ ಯತ್ನಾಳ್ ಭ್ರಷ್ಟಾಚಾರ ಆರೋಪ: 40% ಕಮಿಷನ್ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ- ಸಿಎಂ ಸಿದ್ದರಾಮಯ್ಯ.

06:17 PM Dec 26, 2023 IST | prashanth
ಬಿಎಸ್ ವೈ ವಿರುದ್ದ ಯತ್ನಾಳ್ ಭ್ರಷ್ಟಾಚಾರ ಆರೋಪ  40  ಕಮಿಷನ್ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ  ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಡಿಸೆಂಬರ್,26,2023(www.justkannada.in): ಕೊರೊನಾ ಕಾಲದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಂದಾಜು 40 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಸಗಿದೆ ಎಂದು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೇರವಾಗಿ ಆರೋಪಿಸುವ ಮೂಲಕ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿತ್ತು ಎನ್ನುವ ನಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಮಾರು ರೂ.4,000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿದೆ ಎಂದು ಪತ್ರಿಕಾಗೋಷ್ಠಿ ಕರೆದು ದಾಖಲೆಗಳ ಸಮೇತ ನಾವು ಆರೋಪ ಮಾಡಿದ್ದೆವು. ಯತ್ನಾಳ್ ಅವರ  ಆರೋಪವನ್ನು ಗಮನಿಸಿದರೆ ನಮ್ಮ ಅಂದಾಜಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಭ್ರಷ್ಟಾಚಾರ ನಡೆದಿರುವಂತೆ ಕಾಣುತ್ತಿದೆ. ನಮ್ಮ ಆರೋಪ ಕೇಳಿ ಹೌಹಾರಿ ಬಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಸಚಿವರ ದಂಡು ಈಗ ಎಲ್ಲಿ ಅಡಗಿ ಕೂತಿದೆ? ಎಂದು ಕುಟುಕಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಟ್ ಎಂಡ್ ರನ್ ಮಾಡಬಾರದು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಬದ್ಧತೆಯನ್ನು ಅವರು ಹೊಂದಿದ್ದರೆ ತಮ್ಮ ಆರೋಪವನ್ನು ತಾರ್ಕಿಕ ಅಂತ್ಯದೆಡೆಗೆ ಒಯ್ಯಬೇಕು. ಇದಕ್ಕಾಗಿ  ಅವರು ಕೊರೊನಾ ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಇರುವ ಎಲ್ಲ ಮಾಹಿತಿಯನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಒಪ್ಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ವಿಜಯೇಂದ್ರ ಸೇರಿದಂತೆ ಹಿಂದಿನ ಸರ್ಕಾರದ ಸಂಪುಟದಲ್ಲಿದ್ದ ಕೆಲವು ಸಚಿವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ಮೌನವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ತನ್ನನ್ನು ದೇಶದ "ಚೌಕಿದಾರ" ಎಂದು ಬಣ್ಣಿಸಿಕೊಳ್ಳುತ್ತಿರುವ ಮತ್ತು "ನ ಖಾವೂಂಗಾ ನಾ ಖಾನೆ ದೂಂಗಾ" ಎಂದು ಆಗಾಗ ಗುಟುರು ಹಾಕುವ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ತಮ್ಮದೇ ಪಕ್ಷದ ನಾಯಕ ಮಾಡುತ್ತಿರುವ ಇಂತಹ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮೌನವಾಗಿರುವುದು ನಿಗೂಢವಾಗಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಲ್ಲಿ ಕೇಂದ್ರದ ನಾಯಕರಿಗೂ ಪಾಲು ಹೋಗಿದೆ  ಎನ್ನುವ  ಆರೋಪಕ್ಕೆ ಎಡೆ ಮಾಡಿಕೊಡುವುದಿಲ್ಲವೇ ಪ್ರಧಾನಿಗಳೇ? ಎಂದು ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Key words: Yatnal- corruption- allegation -against –BSY-40% commission -CM Siddaramaiah

Tags :

.