HomeBreaking NewsLatest NewsPoliticsSportsCrimeCinema

ಶಿಸ್ತು ಬದ್ಧ ಜೀವನ ನಡೆಸಲು ಯೋಗ ಅತ್ಯಂತ ಪ್ರೇರಣೆ: ಸಚಿವ ಡಾ ಹೆಚ್.ಸಿ. ಮಹದೇವಪ್ಪ

10:23 AM Jun 21, 2024 IST | prashanth

ಮೈಸೂರು.ಜೂನ್,21,2024 (www.justkannada.in): ಭಾರತ ದೇಶವು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರಿ ಯೋಗವನ್ನು ಅಂತರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡಲು ಘೋಷಣೆ ಮಾಡಿ ಇಂದಿಗೆ ಹತ್ತು ವರ್ಷವಾಗಿದೆ. ಶಿಸ್ತು ಬದ್ಧ ಜೀವನ ನಡೆಸಲು ಯೋಗ ಅತ್ಯಂತ ಪ್ರೇರಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಅರಮನೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್‌ ಇಲಾಖೆ ವತಿಯಿಂದ ನಡೆದ ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ,   ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಯೋಗ ಮಾಡುವುದರಿಂದ ನಮ್ಮ ದೇಹದ ನಿಯಂತ್ರಣ, ಅಂಗಾಂಗಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯ ಚಟುವಟಿಕೆ, ಮನಸ್ಸಿನ ಸಮತೋಲನ ಆರೋಗ್ಯದ ವೃದ್ಧಿ,  ಶಿಸ್ತು ಬದ್ಧವಾದ ಜೀವನ ನಡೆಸಲು ಅತ್ಯಂತ ಪ್ರೇರಣೆಯಾಗಿರುವುದು ಆರೋಗ್ಯ ಎಂದು ಹೇಳಿದರು.

ಯೋಗವನ್ನು ನಿಯಮ ಬದ್ಧವಾಗಿ ಪಾಲನೆ ಮಾಡುವುದರಿಂದ ಶಿಸ್ತು ಬದ್ಧ ಜೀವನ ನಡೆಸಿ, ಆರೋಗ್ಯದ ವೃದ್ಧಿ ಮಾಡಿಕೊಂಡು ಸಮಾಜ ಹಾಗೂ ಕುಟುಂಬವನ್ನು ಲವಲವಿಕೆಯಿಂದ ನೋಡಿಕೊಂಡು ಹೋಗಬಹುದು. ಕಳೆದು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ರೈಸ್ ಕೋರ್ಸ್ ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಾಡಿ ವಿಶ್ವ ಗಿನ್ನಿಸ್ ದಾಖಲೆಯನ್ನು ಮೈಸೂರು ಮಾಡಿತ್ತು ಎಂದರು. ನಿರ್ದಿಷ್ಟವಾದ ದೇಹದ ಸಮಸ್ಯೆಗಳಿಗೆ ನಿರ್ದಿಷ್ಟವಾದ ಯೋಗ ಕ್ರಿಯೆಗಳನ್ನು ಮಾಡಿದ್ದಲ್ಲಿ ಆರೋಗ್ಯಯುತವಾಗಿರಲು ಸಾಧ್ಯ ಎಂಬುದನ್ನು ವೈದ್ಯಕೀಯ ಶಾಸ್ತ್ರ ಹಾಗೂ ತಜ್ಞರು ಹೇಳಿದ್ದಾರೆ ಎಂದರು.

ಸಂಸದ ಯದುವೀ‌ರ್ ಕೃಷ್ಣದತ್ತ ಚಾಮರಾಜ ಒಡೆಯ‌ರ್ ಅವರು ಮಾತನಾಡಿ, ಮೈಸೂರಿನಲ್ಲಿ ಯೋಗ ದಿನಾಚರಣೆಯನ್ನು ಪ್ರತಿ ವರ್ಷವೂ ಬಹಳ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಭಾರತದಲ್ಲಿ ಆಧುನಿಕ ಕಾಲದ ಯೋಗ ಮೈಸೂರಿನಿಂದ ಸೃಷ್ಟಿಯಾಗಿದೆ ಎಂದರೆ ತಪ್ಪಿಲ್ಲ. ಅಂದಿನ ಕಾಲದ ಶ್ರೀತತ್ವ ನಿಧಿಯಲ್ಲಿ 108 ಆಸನಗಳನ್ನು ದಾಖಲೆ ಮಾಡಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯೋಗ ಅಭ್ಯಾಸ ಮೈಸೂರಿನಲ್ಲಿ ಶುರುವಾಗಿತ್ತು ಎಂದರು.

ಹಿಂದಿನ ಪರಂಪರೆಯ ರಾಯಭಾರಿಯಾಗಿ ಇಂದು ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ. ದಸರಾ ಸಂದರ್ಭದಲ್ಲಿ ಯೋಗ ದಿನವನ್ನು ಗಿನ್ನಿಸ್ ದಾಖಲೆಗೆ ಮಾಡಲು ಸಿದ್ಧವಾಗಬೇಕು ಇದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ಹೇಳಿದರು.

ಶಾಸಕರಾದ ಟಿ.ಎಸ್‌.ಶ್ರೀವತ್ಸ ಅವರು ಮಾತನಾಡಿ, ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು. ಕಳೆದ ಎರಡು ವರ್ಷದ ಹಿಂದೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮೊಂದಿಗೆ ಯೋಗ ಮಾಡಿದ್ದು ನೆನಪಿಗೆ ಬರುತ್ತದೆ. ಯೋಗ ಎಂದರೆ ಮೈಸೂರು, ಮೈಸೂರು ಎಂದರೆ ಯೋಗ. ಅನೇಕ ಪ್ರಥಮಗಳಿಗೆ ಮೈಸೂರು, ಮಹಾರಾಜರು ಮೈಸೂರು ಅರಮನೆ,  ಕಾರಣವಾಗಿದೆ. ಇದನ್ನು ಇಂದು ನೆನೆದುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ, ಪತಂಜಲಿ ಮಹಾಮುನಿಗಳಿಂದ ಯೋಗ ಪ್ರಪಂಚಕ್ಕೆ ಪರಿಚಯವಾಗಿದೆ. ಜಾಗತಿಕ ಮಟ್ಟದಲ್ಲಿ ಯೋಗದ ಮಹತ್ವ ಅರಿತು ಪಾಶ್ಚಿಮಾತ್ಯ ದೇಶಗಳು ಯೋಗದ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ಯೋಗಕ್ಕೆ ಭಾರತದ ಕೊಡುಗೆ ಜೊತೆಗೆ ಮೈಸೂರು ಸಹ ಯೋಗದ ಭೂಪಟದಲ್ಲಿ ತನ್ನದೇ ಆದ ಛಾಪುವನ್ನು ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬೇರೆಯ ಕಾರ್ಯಕ್ರಮದಲ್ಲಿ ಜನಸಾಮಾನ್ಯರನ್ನು ಸೇರಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತೇವೆ ಆದರೆ ಯೋಗಕ್ಕೆ ಆಹ್ವಾನ ನೀಡಿದರೆ   ಎಲ್ಲ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿ ಜನರು ಬರುತ್ತಾರೆ. ದಸರಾ ಸಂದರ್ಭದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಮತ್ತೊಮ್ಮೆ ಮೈಸೂರುನಲ್ಲಿ ಯೋಗಾದ ಗಿನ್ನಿಸ್ ದಾಖಲೆ ನಿರ್ಮಿಸಲು ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತದೆ. ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ಮಾಡಿ ಯೋಗ ದಸರವನ್ನು ಆಚರಣೆ ಮಾಡಿ ಯೋಗದ ಮಹತ್ವವನ್ನು ಎಲ್ಲೆಡೆ ಸಾರೋಣ ಎಂದು ಹೇಳಿದರು.

ಜಿಲ್ಲಾಡಳಿತದ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಕೈಜೋಡಿಸಿದಂತಹ ಮೈಸೂರು ಜಿಲ್ಲಾ ಯೋಗ ಒಕ್ಕೂಟ, ಮೈಸೂರು ಜಿಲ್ಲಾ ಯೋಗ ಫೌಂಡೇಶನ್, ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಇಲ್ಲಿ ಸೇರಿರುವ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಸಿ.ಎನ್.ಮಂಜೇಗೌಡ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಉಪಸ್ಥಿತರಿದ್ದರು.

Key words: yoga day, mysore, Minister, H.C. Mahadevappa

Tags :
H.C.MahadevappaministerMysore.Yoga Day
Next Article